ಇಂದೋರ್ (ಮಧ್ಯಪ್ರದೇಶ): ಸಾಕುನಾಯಿಗಳ ವಿಚಾರವಾಗಿ ನಡೆದ ಜಗಳದಲ್ಲಿ ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ವೊಬ್ಬ ಗುಂಡು ಹಾರಿಸಿ ಇಬ್ಬರನ್ನು ಕೊಲೆಗೈದ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಓರ್ವ ಗರ್ಭಿಣಿ ಸೇರಿ ಇತರ ಆರು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿ ಸೆಕ್ಯೂರಿಟಿ ಗಾರ್ಡ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ವರ್ಮಾ (28) ಹಾಗೂ ಈತನ ಸೋದರ ಮಾವ ವಿಮಲ್ ಅಮ್ಚಾ (35) ಕೊಲೆಗೀಡಾದವರು. ವಿಮಲ್ ಅಮ್ಚಾ ಹೇರ್ ಕಟಿಂಗ್ ಸಲೂನ್ ನಡೆಸುತ್ತಿದ್ದರು. ರಾಜ್ಪಾಲ್ ಸಿಂಗ್ ರಾಜಾವತ್ ಗುಂಡು ಹಾರಿಸಿದ ಆರೋಪಿ. ಈತ ಬ್ಯಾಂಕ್ ಆಫ್ ಬರೋಡಾದ ಸ್ಥಳೀಯ ಶಾಖೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಪರವಾನಗಿ ಹೊಂದಿದ್ದ ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಅಮರೇಂದ್ರ ಸಿಂಗ್ ಪ್ರತಿಕ್ರಿಯಿಸಿ, ''ಖಜ್ರಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಕೃಷ್ಣಾಬಾಗ್ ಕಾಲೋನಿಯಲ್ಲಿ ಗುರುವಾರ ರಾತ್ರಿ ಗುಂಡಿನ ದಾಳಿ ಘಟನೆ ನಡೆದಿದೆ. ಬ್ಯಾಂಕ್ ಸೆಕ್ಯೂರಿಟಿ ಗಾರ್ಡ್ ಆಗಿರುವ ರಾಜಾವತ್ ತನ್ನ ಸಾಕು ನಾಯಿಯನ್ನು ವಾಕಿಂಗ್‌ಗೆಂದು ಹೊರಗಡೆ ಕರೆದುಕೊಂಡು ಬಂದಿದ್ದ. ಈ ವೇಳೆ ರಾಜಾವತ್ ಜೊತೆಗಿದ್ದ ನಾಯಿ ನೆರೆಯ ಮನೆಯವರ ನಾಯಿಯನ್ನು ನೋಡಿ ಬೊಗಳಲು ಪ್ರಾರಂಭಿಸಿದೆ. ಇದೇ ವಿಷಯ ರಾಜಾವತ್ ಮತ್ತು ಅಮ್ಚಾ ಕುಟುಂಬ ಸದಸ್ಯರ ನಡುವಿನ ವಾಗ್ವಾದಕ್ಕೆ ಕಾರಣವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದ ಅರಾರಿಯಾದಲ್ಲಿ ಪತ್ರಕರ್ತನ ಹತ್ಯೆ: ಮನೆಗೆ ನುಗ್ಗಿದ ದುಷ್ಕರ್ಮಿಗಳಿಂದ ಗುಂಡಿನ ದಾಳಿ..!
''ಈ ವಾಗ್ವಾದ ತೀರ ವಿಕೋಪಕ್ಕೆ ತಿರುಗಿದೆ. ಆಗ ರಾಜಾವತ್ ತನ್ನ ಮನೆಗೆ ಹೋಗಿ ಬಂದೂಕು ತೆಗೆದು ಟೆರೇಸ್ನಿಂದ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ. ನಂತರ ರಸ್ತೆಯಲ್ಲಿ ನಿಂತಿದ್ದ ಜನರ ಮೇಲೂ ಗುಂಡಿನ ದಾಳಿ ನಡೆಸಿದ್ದಾನೆ. ಪರಿಣಾಮವಾಗಿ ರಾಹುಲ್ ವರ್ಮಾ ಹಾಗೂ ಈತನ ಸಿಬ್ಬಂದಿ ವಿಮಲ್ ಅಮ್ಚಾ ಗುಂಡು ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಮೃತ ರಾಹುಲ್ ವರ್ಮಾ ಅವರ ಗರ್ಭಿಣಿ ಪತ್ನಿ ಜ್ಯೋತಿ ಸೇರಿ ಆರು ಜನರು ಗಾಯಗೊಂಡಿದ್ದು, ಇವರ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ'' ಎಂದು ಅಮರೇಂದ್ರ ಸಿಂಗ್ ಮಾಹಿತಿ ನೀಡಿದ್ದಾರೆ.
''ಈ ಘಟನೆಯ ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಆರೋಪಿ ರಾಜಾವತ್, ಈತ ಸುಧೀರ್ ಹಾಗೂ ಸೋದರಳಿಯ ಶುಭಂ ಎಂಬವರನ್ನು ಬಂಧಿಸಲಾಗಿದೆ. ದಾಳಿಗೆ ಬಳಸಿದ ಡಬಲ್ ಬ್ಯಾರೆಲ್ 12 ಬೋರ್ ಗನ್, ಕಾರ್ಟ್ರಿಡ್ಜ್, ಕೆಲವು ಜೀವಂತ ಗುಂಡುಗಳು ಹಾಗೂ ಗನ್ ಲೈಸನ್ಸ್ ವಶಪಡಿಸಿಕೊಳ್ಳಲಾಗಿದೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ'' ಎಂದು ಅವರು ಮಾಹಿತಿ ನೀಡಿದರು.
ಮತ್ತೊಂದೆಡೆ, ಜನನಿಬಿಡ ಕೃಷ್ಣಾಬಾಗ್ ಕಾಲೊನಿ ಬಡಾವಣೆಯಲ್ಲಿ ನಡೆದ ಜೋಡಿ ಕೊಲೆಯಿಂದ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಆರೋಪಿ ಸೆಕ್ಯೂರಿಟಿ ಗಾರ್ಡ್ ರಾಜಾವತ್ ಟೆರೇಸ್ನಿಂದ ಗುಂಡು ಹಾರಿಸುತ್ತಿರುವ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ.
ಇದನ್ನೂ ಓದಿ: Double Murder: ಇಬ್ಬರು ವೃದ್ಧ ವ್ಯಕ್ತಿಗಳನ್ನು ಹೊಡೆದು ಕೊಂದ ಮಾನಸಿಕ ಅಸ್ವಸ್ಥ; ಹೆದ್ದಾರಿಯಲ್ಲಿ ಶವ ಎಳೆದೊಯ್ದು ಕ್ರೌರ್ಯ!