ಉಮರಿಯಾ (ಮಧ್ಯ ಪ್ರದೇಶ): ಮಧ್ಯಪ್ರದೇಶದ ಹಳ್ಳಿಯೊಂದರ 25 ವರ್ಷದ ಮಹಿಳೆಯೊಬ್ಬರು ತಮ್ಮ ಧೈರ್ಯವನ್ನು ಪ್ರದರ್ಶಿಸಿದ ವಿಷಯ ಈಗ ಎಲ್ಲೆಡೆ ಚರ್ಚೆಯ ವಿಷಯವಾಗಿದೆ. ಹುಲಿಯ ದವಡೆಯಿಂದ ತನ್ನ 15 ತಿಂಗಳ ಮಗುವನ್ನು ರಕ್ಷಿಸಿದ ಈ ಮಹಿಳೆಯ ಧೈರ್ಯ ಮೆಚ್ಚುವಂಥದ್ದಾಗಿದೆ.
ಉಮಾರಿಯಾ ಜಿಲ್ಲೆಯ ರೊಹನಿಯಾ ಗ್ರಾಮದ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಮಾಲಾ ಬೀಟ್ ಪ್ರದೇಶದಲ್ಲಿ ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ತಾಯಿ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಲಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದ್ದು, ಅರಣ್ಯ ಪ್ರದೇಶದಲ್ಲಿ ವಾಸಿಸುವ ಜನರ ಸುರಕ್ಷತೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಹುಲಿಯೊಂದಿಗೆ ಹೋರಾಡಿದ ಮಹಿಳೆಯನ್ನು ಅರ್ಚನಾ ಚೌಧರಿ ಎಂದು ಗುರುತಿಸಲಾಗಿದೆ. ಈಕೆ ತಮ್ಮ ಮಗ ರವಿರಾಜ್‌ನನ್ನು ಹೊಲಕ್ಕೆ ಕರೆದೊಯ್ದಿದ್ದಾಗ ಹುಲಿಯೊಂದು ಆತನ ಮೇಲೆ ದಾಳಿ ಮಾಡಿ ತನ್ನ ದವಡೆಯಿಂದ ಹಿಡಿದಿತ್ತು. ಆಗ ಮಗುವನ್ನು ಉಳಿಸಲು ಹೋದ ಮಹಿಳೆಯ ಮೇಲೂ ಹುಲಿ ದಾಳಿ ಮಾಡಿದೆ. ಆದರೆ ಇದಕ್ಕೆ ಹೆದರದ ಮಹಿಳೆ ಮಗುವನ್ನು ಉಳಿಸುವ ಪ್ರಯತ್ನ ಮುಂದುವರಿಸಿದ್ದಾರೆ. ಇದೇ ಸಂದರ್ಭದಲ್ಲಿ ಆಕೆಯ ಕೂಗಾಟ ಚೀರಾಟ ಕೇಳಿ ಗ್ರಾಮಸ್ಥರು ಆಗಮಿಸಿ ಹುಲಿಯನ್ನು ಓಡಿಸಿದ್ದಾರೆ. ಹೆದರಿದ ಹುಲಿ ಮಗುವನ್ನು ಬಿಟ್ಟು ಅರಣ್ಯದೊಳಗೆ ಪರಾರಿಯಾಗಿದೆ.
ಹುಲಿಯೊಂದಿಗೆ ಹೋರಾಡಿದ ಮಹಿಳೆಯ ಭುಜ, ಕುತ್ತಿಗೆ ಹಾಗೂ ಬೆನ್ನಿನ ಮೇಲೆ ಗಾಯಗಳಾಗಿವೆ. ಮಗುವಿನ ತಲೆ ಹಾಗೂ ಬೆನ್ನಿಗೆ ಕೂಡ ಗಾಯಗಳಾಗಿವೆ. ದಾಳಿಯ ನಂತರ, ಮಹಿಳೆ ಮತ್ತು ಅವರ ಮಗನನ್ನು ತಕ್ಷಣವೇ ಮನ್ಪುರದ ಆರೋಗ್ಯ ಕೇಂದ್ರಕ್ಕೆ ಮತ್ತು ನಂತರ ಚಿಕಿತ್ಸೆಗಾಗಿ ಉಮರಿಯಾದ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಅರಣ್ಯ ಇಲಾಖೆ ಸಿಬ್ಬಂದಿ ರಾಮ್ ಸಿಂಗ್ ಮಾರ್ಕೊ ಮಾಹಿತಿ ನೀಡಿದರು.
ಮಗು ಮತ್ತು ತಾಯಿಯ ಮೇಲೆ ದಾಳಿ ಮಾಡಿದ ಹುಲಿಯನ್ನು ಪತ್ತೆಹಚ್ಚಲು ಅರಣ್ಯ ಇಲಾಖೆಯ ತಂಡ ಪ್ರಯತ್ನಿಸುತ್ತಿದೆ ಎಂದು ಅವರು ತಿಳಿಸಿದರು. ಉಮಾರಿಯಾ ಕಲೆಕ್ಟರ್ ಸಂಜೀವ್ ಶ್ರೀವಾಸ್ತವ್ ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆ ಮತ್ತು ಮಗುವಿನ ಯೋಗಕ್ಷೇಮ ವಿಚಾರಿಸಿದ್ದಾರೆ.