ಭೋಪಾಲ್: ಭೋಪಾಲ್ ಅನಿಲ ದುರಂತ ಸಂತ್ರಸ್ತರ ವಿಧವೆಯರಿಗೆ ತಿಂಗಳಿಗೆ 1,000 ರೂಪಾಯಿ ಹೆಚ್ಚುವರಿ ಪಿಂಚಣಿ ನೀಡಲು ಮಧ್ಯಪ್ರದೇಶ ಸಚಿವ ಸಂಪುಟ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಇದು ಭೋಪಾಲ್ ಅನಿಲ ಸೋರಿಕೆ ಸಂತ್ರಸ್ತರ ಬದುಕುಳಿದ ವಿಧವೆಯರಿಗೆ ಸಾಮಾಜಿಕ ಭದ್ರತಾ ಪಿಂಚಣಿಗೆ ಹೆಚ್ಚುವರಿಯಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಮಹಿಳೆಯರಿಗೆ ಹೆಚ್ಚುವರಿಯಾಗಿ ಇಷ್ಟು ಹಣ ನೀಡುವ ಪ್ರಸ್ತಾಪಕ್ಕೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿದರೂ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಹಿಂದಿನ ಸಿಎಂ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ 2019ರಲ್ಲಿ ಹೆಚ್ಚುವರಿ ಪಿಂಚಣಿಯನ್ನು ನಿಲ್ಲಿಸಿತ್ತು ಎಂದು ಸರ್ಕಾರದ ವಕ್ತಾರ ಮಿಶ್ರಾ ಆರೋಪಿಸಿದರು. ಬಿಜೆಪಿ ಸರ್ಕಾರವು 2013ರಲ್ಲಿ ಪಿಂಚಣಿಯನ್ನು ಆರಂಭಿಸಿದೆ. ಮತ್ತು ಪ್ರಸ್ತುತ ಆಡಳಿತದಲ್ಲಿ ಈ ಸೌಲಭ್ಯವನ್ನು ಪುನರಾರಂಭಿಸಲು ನಿರ್ಧರಿಸಿದೆ ಎಂದರು.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಎನ್‌ಜಿಒ ಭೋಪಾಲ್ ಗ್ರೂಪ್ ಫಾರ್ ಇನ್ಫಾರ್ಮೇಷನ್ ಅಂಡ್ ಆಕ್ಷನ್ ಸಂಸ್ಥೆಯ ರಚನಾ ಧಿಂಗ್ರಾ, ಕಳೆದೊಂದು ವರ್ಷದಲ್ಲಿ ಹಲವಾರು ಘೋಷಣೆಗಳಾಗಿವೆ. ಆದರೆ ಈ ವಿಧವೆಯರ ಖಾತೆಗೆ ಈವರೆಗೂ ಒಂದು ರೂಪಾಯಿ ಹಣವೂ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ: ದೇಶದ ಮೊದಲ ಕೊರೊನಾ ಪೀಡಿತ ಯುವತಿಗೆ ಮತ್ತೆ ಲಕ್ಷಣ ರಹಿತ ಸೋಂಕು..
ಘೋರ ದುರಂತದ ಸಂಕ್ಷಿಪ್ತ ಮಾಹಿತಿ..
ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ಹೊರವಲಯದಲ್ಲಿರುವ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್‌ನ ಕೀಟನಾಶಕ ಘಟಕದಿಂದ 1984ರ ಡಿಸೆಂಬರ್ 2-3 ರ ಮಧ್ಯರಾತ್ರಿ ಮೀಥೈಲ್ ಐಸೊಸೈನೇಟ್ ಸೋರಿಕೆಯಾದ ನಂತರ 15,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.