ದೇವಾಸ್ (ಮಧ್ಯಪ್ರದೇಶ) : ಜಿಲ್ಲೆಯ ನೆಮಾವರ್ ಪಟ್ಟಣದಲ್ಲಿ ಹತ್ಯೆಗೀಡಾದ ಐವರು ದಲಿತ ಕುಟುಂಬದವರ ಸಂಬಂಧಿಕರನ್ನು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಭೇಟಿಯಾಗಿ ಸಾಂತ್ವನ ಹೇಳಿದರು. ಇದೇ ವೇಳೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅವರು ಆಗ್ರಹಿಸಿದರು.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಭೀಕರ ಹತ್ಯೆಯ ಬಗ್ಗೆ ಮೌನ ಮುರಿಯುವಂತೆ ಆಗ್ರಹಿಸಲು ನಾನು ದೆಹಲಿಯಿಂದ ಇಲ್ಲಿಗೆ ಬಂದಿದ್ದೇನೆ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆದೇಶ ನೀಡುವವರೆಗೂ ನಾವು ಸುಮ್ಮನಿರುವುದಿಲ್ಲ ಎಂದು ಆಜಾದ್ ಎಚ್ಚರಿಕೆ ರವಾನಿಸಿದ್ದಾರೆ.
ಕಳೆದ ಮೇ 13 ರಂದು ನಾಪತ್ತೆಯಾಗಿದ್ದ ನೆಮಾವರ್ನ ಮಮತಾ ಬಾಲೈ (45), ಅವರ ಪುತ್ರಿಯರಾದ ರೂಪಾಲಿ (21) ಮತ್ತು ದಿವ್ಯಾ (14) ಸಂಬಂಧಿಗಳಾದ ಪೂಜಾ (15) ಮತ್ತು ಪವನ್ (14) ಅವರ ಮೃತದೇಹಗಳು ಕೃಷಿ ಜಮೀನಿನಲ್ಲಿ ಹೂತು ಹಾಕಿರುವುದು ಜೂನ್ 29 ರಂದು ಬೆಳಕಿಗೆ ಬಂದಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಮೃತಪಟ್ಟವರ ಪೈಕಿ ಯುವತಿ ರೂಪಾಲಿಯೊಂದಿಗೆ ಸುರೇಂದ್ರ ರಜಪೂತ್ ಎಂಬಾತ ಸಂಬಂಧ ಹೊಂದಿದ್ದ. ಈ ನಡುವೆ, ಆತ ಇನ್ನೊಬ್ಬಳು ಯುವತಿಯೊಂದಿಗೆ ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಇದರಿಂದ ನೊಂದ ಯುವತಿ ರೂಪಾಲಿ, ಆತ ಮದುವೆಯಾಗಬೇಕಿದ್ದ ಹುಡುಗಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದ್ದಾಗಿ ಬರೆದಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡ ಸುರೇಂದ್ರ ರಜಪೂತ್, ಆತನ ಸಹೋದರ ವಿರೇಂದ್ರ, ಸ್ನೇಹಿತರಾದ ವಿವೇಕ್ ತಿವಾರಿ, ರಾಜ್ ಕುಮಾರ್, ಮನೋಜ್ ಕೊರ್ಕು ಮತ್ತು ಕರಣ್ ಕೊರ್ಕು ಎಂಬವರ ಜೊತೆ ಸೇರಿಕೊಂಡು ಐವರನ್ನು ಕೊಂದು ಹೊಲದಲ್ಲಿ ಹೂತು ಹಾಕಿರಬಹುದು ಎಂದು ಶಂಕಿಸಲಾಗಿದೆ.
ಈಗಾಗಲೇ ಈ ಎಲ್ಲಾ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.