ಬಸಿರತ್(ಪಶ್ಚಿಮ ಬಂಗಾಳ): ಆಸ್ತಿಗೋಸ್ಕರ ಹೆತ್ತ ತಾಯಿ, ತಂದೆ, ಒಡಹುಟ್ಟಿದ ಅಣ್ಣ-ತಮ್ಮಂದಿರನ್ನು ಮನೆಯಿಂದ ಹೊರಹಾಕುವ ಅನೇಕ ಘಟನೆಗಳು ಹೆಚ್ಚಾಗುತ್ತಿವೆ. ಸದ್ಯ ಅಂತಹ ಮತ್ತೊಂದು ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ. ಬರೋಬ್ಬರಿ ಐದು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿರುವ ತಾಯಿ ಮಗನ ವಿರುದ್ಧ ಗೆಲುವು ಸಾಧಿಸಿದ್ದಾರೆ.
ತಾಯಿ ಹೆಸರಿನಲ್ಲಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕಬಳಿಸುವ ಉದ್ದೇಶದಿಂದ ಮಗನೋರ್ವ ಹೆತ್ತ ವೃದ್ಧ ತಾಯಿಯನ್ನೇ ಥಳಿಸಿ, ಮನೆಯಿಂದ ಹೊರಹಾಕಿದ್ದನು. 65 ವರ್ಷದ ಅಂಜಲಿ ಬಾಲ್ ಘೋಷ್ ಇದೀಗ ಕಾನೂನು ಹೋರಾಟದಲ್ಲಿ ಗೆಲ್ಲುವ ಮೂಲಕ ಮಗನಿಗೆ ಸರಿಯಾದ ಬುದ್ಧಿ ಕಲಿಸಿದ್ದಾರೆ.
ಏನಿದು ಪ್ರಕರಣ.. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಬಿಥಾರಿ-ಹಕಂಪುರ್ ಪಂಚಾಯತ್ನ ಘೋಷ್ಪಾರಾ ಗ್ರಾಮದಲ್ಲಿ ನಡೆದ ಘಟನೆ ಇದಾಗಿದೆ. ಅಂಜಲಿ ಪತಿ ಕಳೆದ ಏಳು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಇವರಿಗೆ ಓರ್ವ ಪುತ್ರನಿದ್ದು, ಮಿಠಾಯಿ ವ್ಯಾಪಾರ ಮಾಡುತ್ತಾನೆ. ವೃದ್ಧೆ ಅಂಜಲಿ ಪತಿ ನಾಡು ಘೋಷ್ ಸಾಯುವುದಕ್ಕೂ ಮುಂಚಿತವಾಗಿ ತನ್ನ ಹೆಂಡತಿ ಹೆಸರಿನಲ್ಲಿ ಪೂರ್ವಜರ ಮನೆ ಹಾಗೂ 15 ಎಕರೆ ಜಮೀನು ನೋಂದಣಿ ಮಾಡಿಸಿದ್ದರು.
ತಾಯಿ ಜೊತೆ ಮಗ ದೀಪಂಕರ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಹೀಗಾಗಿ, ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ಳಲು ಹುನ್ನಾರ ನಡೆಸಿದ್ದನು. ಮೇಲಿಂದ ಮೇಲೆ ತಾಯಿ ಮೇಲೆ ಇದೇ ವಿಚಾರವಾಗಿ ಒತ್ತಡ ಹೇರುತ್ತಿದ್ದನು. ಆದರೆ, ವೃದ್ಧೆ ಅಂಜಲಿ ಮಾತ್ರ ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ, ಕೆಲವೊಮ್ಮೆ ಮಗನಿಂದಲೂ ಹಲ್ಲೆಗೊಳಗಾಗುತ್ತಿದ್ದಳು. ಕೊನೆಯದಾಗಿ ಹೆತ್ತಮ್ಮನ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ.
ನಕಲಿ ದಾಖಲೆ ಸೃಷ್ಟಿಸಿ ಮನೆ ಮಾರಾಟ: ವೃದ್ಧೆಯ ಹೆಸರಿನಲ್ಲಿದ್ದ ಆಸ್ತಿ ಪಡೆಯಲು ಅಕ್ರಮ ಮಾರ್ಗ ಕಂಡುಕೊಂಡಿರುವ ಮಗ ದೀಪಂಕರ್, ನಕಲಿ ದಾಖಲೆ ಸೃಷ್ಟಿಸಿ ಸ್ಥಳೀಯ ವ್ಯಕ್ತಿಗೆ 30 ಲಕ್ಷ ರೂಪಾಯಿಗೆ ಮನೆ ಮಾರಾಟ ಮಾಡಿದ್ದಾನೆ. ಇದಾದ ಬಳಿಕ ತಾಯಿ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿದ್ದಾನೆ. ದೈಹಿಕ ಹಾಗೂ ಮಾನಸಿಕ ಕಿರುಕುಳ ಅನುಭವಿಸಿರುವ ತಾಯಿ, ತಾನು ವಾಸವಾಗಿದ್ದ ಮನೆ ತೊರೆದು, ರಸ್ತೆ ಪಕ್ಕದಲ್ಲಿ ಆಶ್ರಯ ಪಡೆದುಕೊಂಡಿದ್ದಾಳೆ.
ಇದನ್ನೂ ಓದಿ: ಆಸ್ತಿಗಾಗಿ ತಾಯಿಯನ್ನೇ ಮನೆಯಿಂದ ಹೊರಹಾಕಿದ ಆರೋಪ ತಳ್ಳಿಹಾಕಿದ ಮಗ
ಕೆಲ ದಿನಗಳ ಕಾಲ ಬೀದಿಯಲ್ಲಿ ವಾಸ ಮಾಡಿರುವ ಮಹಿಳೆ, ತದನಂತರ ಮಗಳ ಮನೆಗೆ ತೆರಳಿದ್ದಾರೆ. ಅಲ್ಲಿಂದ ಕಾನೂನು ಹೋರಾಟ ಶುರು ಮಾಡಿದ್ದಾಳೆ. ಕೋರ್ಟ್ನಲ್ಲಿ ಮಗನ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಸುದೀರ್ಘ 5 ವರ್ಷಗಳ ಕಾಲ ನಡೆದ ವಾದ-ಪ್ರತಿವಾದದ ಬಳಿಕ ಶನಿವಾರ ಅಂತಿಮ ತೀರ್ಪು ಹೊರಬಿದ್ದಿದೆ.
ಸ್ಥಳೀಯ ನ್ಯಾಯಾಲಯದ ಆದೇಶದ ಪ್ರಕಾರ 24 ಗಂಟೆಯೊಳಗೆ ಮನೆಯಲ್ಲಿ ವಾಸ ಮಾಡಲು ಅನುಮತಿ ನೀಡುವಂತೆ ತಿಳಿಸಿದ್ದು, ಸ್ವರೂಪನಗರ ಪೊಲೀಸ್ ಠಾಣೆ ಇದರ ಮೇಲ್ವಿಚಾರಣೆ ವಹಿಸಿಕೊಳ್ಳುವಂತೆ ಸೂಚನೆ ನೀಡಿದೆ. ಒಂದು ವೇಳೆ ಯಾವುದಾದರೂ ಸಮಸ್ಯೆ ಎದುರಾದರೆ, ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕೋರ್ಟ್ನಿಂದ ಆದೇಶ ಹೊರಬಿದ್ದ ಬೆನ್ನಲ್ಲೇ ವೃದ್ಧೆಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಗಿದೆ.