ಹೈದರಾಬಾದ್ (ತೆಲಂಗಾಣ): ಕೇವಲ ಒಂದೇ ತಿಂಗಳ ಅಂತರದಲ್ಲಿ ತಾಯಿ ಹಾಗೂ ಆಕೆಯ ಮಗ, ಮಗಳು ಕೋವಿಡ್ ತಗುಲಿ ಮೃತಪಟ್ಟಿರುವ ಘಟನೆ ತೆಲಂಗಾಣದ ಹೈದರಾಬಾದ್ನಲ್ಲಿ ನಡೆದಿದೆ.
ಮೂವರ ಚಿಕಿತ್ಸೆಗಾಗಿ ಸುಮಾರು 80 ಲಕ್ಷ ರೂಪಾಯಿ ಹಣವನ್ನು ಆಸ್ಪತ್ರೆಗೆ ಸುರಿದರೂ ಇವರ ಜೀವಗಳನ್ನು ಕುಟುಂಬಸ್ಥರಿಗೆ ಉಳಿಸಿಕೊಳ್ಳಲಾಗಲಿಲ್ಲ.
ಹೈದರಾಬಾದ್‌ನ ಶಮ್ಶಾಬಾದ್ನಲ್ಲಿ ವಾಸವಾಗಿರುವ ವಿಟಲಯ್ಯ-ಸುಲೋಚನ ದಂಪತಿಗೆ ಮೂವರು ಗಂಡು ಮತ್ತು ಓರ್ವ ಪುತ್ರಿ ಇದ್ದರು. ಸಂಬಂಧಿಕರೊಂದಿಗೆ ಎಲ್ಲರೂ ಒಟ್ಟಾಗಿ ಮನೆಯಲ್ಲಿ ಕಾರ್ಯಕ್ರಮವೊಂದನ್ನು ನಡೆಸಿದ ಬಳಿಕ ಕುಟುಂಬದ ಐವರಿಗೆ ಕೊರೊನಾ ಅಂಟಿತ್ತು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಆ್ಯಂಬುಲೆನ್ಸ್ -ಸ್ಕೂಟಿ ಮಧ್ಯೆ ಡಿಕ್ಕಿ.. ಮೂವರು ಸವಾರರು ದುರ್ಮರಣ!
ಮೇ 1ರಂದು ಸುಲೋಚನಾ (70) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೇ 12ರಂದು ಕೊನೆಯುಸಿರೆಳೆದಿದ್ದಾರೆ. ಬಳಿಕ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಗ ಸುಭಾಷ್ (50) ಜೂನ್ 8ರಂದು ಮೃತಪಟ್ಟಿದ್ದು, ಮಗಳು ಲಾವಣ್ಯ (45) ನಿನ್ನೆ ಸೋಮವಾರ ಅಸುನೀಗಿದ್ದಾರೆ. ಮೂವರ ಚಿಕಿತ್ಸೆಗಾಗಿ ಬರೋಬ್ಬರಿ 80 ಲಕ್ಷ ರೂ. ಖರ್ಚಾಗಿತ್ತು. ಮೇ 12ರಿಂದ ಜೂನ್ 14ರೊಳಗೆ ಕುಟುಂಬದ ಮೂವರು ಮಹಾಮಾರಿಗೆ ಬಲಿಯಾಗಿದ್ದಾರೆ.