ಲಕ್ನೋ (ಉತ್ತರಪ್ರದೇಶ) : ಮನೆಯಲ್ಲಿ ಮಕ್ಕಳಿದ್ದರೆ ಅವರವರ ನಡುವೆ ಜಗಳ, ಕಾದಾಟ ಇದ್ದೇ ಇರುತ್ತವೆ. ತಾಯಿ ಬಂದು ಗದರಿದರೆ ಸಾಕು ಜಗಳ ನಿಲ್ಲಿಸಿಬಿಡುತ್ತಾರೆ. ಆದರೆ ಇತ್ತೀಚಿನ ಮಕ್ಕಳ ಮನಸ್ಥಿತಿ ತೀರಾ ಸೂಕ್ಷ್ಮ. ಸಣ್ಣದಾಗಿ ಬೈದರೂ ಆತ್ಮಹತ್ಯೆಯ ದಾರಿಯನ್ನೇ ಹಿಡಿಯುತ್ತಿದ್ದಾರೆ. ಇದಕ್ಕೊಂದು ಉದಾಹರಣೆ ಲಕ್ನೋದಲ್ಲಿ ನಡೆದ ಘಟನೆ.
ಮಕ್ಕಳ ನಡುವೆ ಜಗಳವಾಯಿತೆಂದು ತಾಯಿ ಮಧ್ಯಪ್ರವೇಶಿಸಿ, ದೊಡ್ಡ ಮಗನ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ನೊಂದ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿವಿಯಲ್ಲಿ ಕಾರ್ಟೂನ್ ನೋಡುತ್ತಿದ್ದ ಮಕ್ಕಳಿಬ್ಬರು ಜಗಳವಾಡುತ್ತಿದ್ದರು. ಇವರಿಬ್ಬರ ಜಗಳ ಕಂಡು ರೋಸಿ ಹೋದ ತಾಯಿ ದೊಡ್ಡ ಮಗನಾದ 15 ವರ್ಷದ ಆಯುಷ್ಮಾನ್ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ನೊಂದ ಆತ ಬಾಗಿಲು ಹಾಕಿಕೊಂಡು ಸಾವಿನ ಕದ ತಟ್ಟಿದ್ದಾನೆ.
ಇದನ್ನೂ ಓದಿ: ಕಾಂಪೌಂಡ್ ಹಾರಿ ಟೆರೇಸ್ ತಲುಪಿದ ಪ್ರಿಯಕರ: ಏಕಾಂತದಲ್ಲಿದ್ದಾಗ ದಿಢೀರ್ ಬಂದ ಪ್ರೇಯಸಿಯ ತಾಯಿ.. ನಡೀತು ದುರಂತ
ಘಟನೆಯ ವಿವರ: ಪತಿ ರಾಜೇಶ್ ತಿವಾರಿ ಮರಣದ ಬಳಿಕ ರುಮಿಕಾ ತನ್ನಿಬ್ಬರು ಮಕ್ಕಳಾದ ಆಯುಷ್ಮಾನ್ ಮತ್ತು ಅಂಶುಮಾನ್ ಜೊತೆ ಲಕ್ನೋದ ವಿಷನ್ ವೆಗ್ನಲ್ಲಿ ವಾಸಿಸುತ್ತಿದ್ದರು. ರುಮಿಕಾ ರಾತ್ರಿ ಮನೆ ಕೆಲಸ ಮಾಡುತ್ತಿದ್ದು, ಪುತ್ರರಿಬ್ಬರು ಮೊಬೈಲ್ ಹಿಡಿದು ಕೋಣೆಯಲ್ಲಿ ಟಿವಿ ನೋಡುತ್ತಿದ್ದರು. ಚಿಕ್ಕವನಾದ ಅಂಶುಮಾನ್ ಕಾರ್ಟೂನ್ ನೋಡುತ್ತಿರುವಾಗ ಆಯುಷ್ಮಾನ್ ಚಾನೆಲ್ ಬದಲಾಯಿಸಿದ್ದಾನೆ. ಈ ವಿಷಯವಾಗಿ ಅಣ್ಣ ತಮ್ಮಂದಿರು ಜಗಳ ಮಾಡಿಕೊಂಡಿದ್ದಾರೆ.
ಕೋಪಗೊಂಡ ಆಯುಷ್ಮಾನ್ ಅಂಶುಮಾನ್ ಕೆನ್ನೆಗೆ ಮೂರು ಬಾರಿ ಹೊಡೆದಿದ್ದು, ರೂಮಿನಿಂದ ಹೊರಕ್ಕೆ ಎಳೆದುಕೊಂಡು ಹೋಗಿದ್ದಾನೆ. ಇದನ್ನು ಕಂಡು ಕೋಪಗೊಂಡ ತಾಯಿ ರುಮಿಕಾ ಆಯುಷ್ಮಾನ್ ಕೆನ್ನೆಗೆ ಬಾರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆತ ತಾಯಿಯ ಮೊಬೈಲ್ ಹಿಡಿದುಕೊಂಡು ಹೋಗಿ ಕೋಣೆಗೆ ಬೀಗ ಹಾಕಿಕೊಂಡಿದ್ದಾನೆ. ಸ್ವಲ್ಪ ಹೊತ್ತಿನಲ್ಲಿ ಬಾಗಿಲು ತೆಗೆಯುತ್ತಾನೆ ಎಂದು ಭಾವಿಸಿದ ತಾಯಿಗೆ ಆತ ಬಾಗಿಲು ತೆಗೆಯದೇ ಇರುವುದು ಕಂಡು ಬಡಿಯಲು ಆರಂಭಿಸಿದ್ದಾರೆ. ಬಳಿಕ ರೂಮಿನ ಕಿಟಕಿಯಿಂದ ಇಣುಕಿ ನೋಡಿದಾಗ ಆಯುಷ್ಮಾನ್ ಸಾಯಲು ಪ್ರಯತ್ನ ಪಡುತ್ತಿರುವುದು ಕಂಡುಬಂದಿದೆ. ತಾಯಿ ಎಷ್ಟೇ ಕೂಗಾಡಿದರೂ, ಬೇಡಿಕೊಂಡರೂ ಒಪ್ಪದ ಮಗ ಕೊನೆಗೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೊಬ್ಬೆ ಕೇಳಿ ಬಂದ ಸ್ಥಳೀಯರು ಕೋಣೆಯ ಬಾಗಿಲನ್ನು ಒಡೆಯಲು ಪ್ರಾರಂಭಿಸಿದರು. ಆದರೆ ಕಬ್ಬಿಣದ ಬಾಗಿಲು ಆಗಿದ್ದರಿಂದ ಮುರಿಯಲು ಅಷ್ಟು ಸುಲಭದಲ್ಲಿ ಸಾಧ್ಯವಾಗಲಿಲ್ಲ. ಬಳಿಕ ಗ್ಯಾಸ್ ಸಿಲಿಂಡರ್ನಿಂದ ಬಾಗಿಲಿಗೆ ಹಲವು ಬಾರಿ ಹೊಡೆದಿದ್ದು ಕೊನೆಗೂ ತೆರೆದುಕೊಂಡಿದೆ. ನಂತರ ಆಯುಷ್ಮಾನ್ ಅನ್ನು ಕೋಣೆಯಿಂದ ಹೊರತಂದು ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅದಾಗಲೇ ಆತ ಸಾವನ್ನಪ್ಪಿರುವುದಾಗಿ ಅಲ್ಲಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಇದನ್ನೂ ಓದಿ: ಮಾರಕಾಸ್ತ್ರದಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.. ಕಲಬುರಗಿಯಲ್ಲಿ ಹುಚ್ಚಾಟ ಮೆರೆದ ವ್ಯಕ್ತಿ ಕಾಲಿಗೆ ಪೊಲೀಸ್ ಫೈರಿಂಗ್