ಲಖನೌ: ಮಕ್ಕಳು ಆಗದಿದ್ದರೆ ದತ್ತು ಪಡೆದು ಅದನ್ನೇ ತಮ್ಮ ಮಗು ಎಂದು ಬಲು ಅಕ್ಕರೆಯಿಂದ ಪೋಷಿಸುವ ಪೋಷಕರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಮಹಿಳೆ ದತ್ತು ಪಡೆದ ಮಗಳಿಗೆ ಚಿತ್ರಹಿಂಸೆ ನೀಡಿ, ಅವಳ ಗುಪ್ತಾಂಗಕ್ಕೆ ಕುದಿಯುವ ಎಣ್ಣೆಯನ್ನು ಎರಚಿ ಕ್ರೂರವಾಗಿ ನಡೆದುಕೊಂಡ ಅಮಾನವೀಯ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪತಿ ನೀಡಿದ ದೂರಿನ ಮೇರೆಗೆ ಮಹಿಳೆಯನ್ನು ಬಂಧಿಸಲಾಗಿದೆ.
ಘಟನೆ ಏನು?: ರಾಜಧಾನಿ ಲಖನೌದ ಶಾಂತಿನಗರದ ನಿವಾಸಿಯಾದ ಅಜಯ್ ರಾಥೋಡ್ ದಂಪತಿಗೆ ಮಕ್ಕಳಾಗದ್ದಕ್ಕೆ 6 ವರ್ಷದ ಬಾಲಕಿಯನ್ನು ಇದೇ ಫೆಬ್ರವರಿಯಲ್ಲಿ ದತ್ತು ಪಡೆದಿದ್ದರು. ಅಜಯ್ ರಾಥೋಡ್ ಲಖನೌನಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.
ವ್ಯಾಪಾರದ ವೇಳೆ ದತ್ತು ಮಗಳು ತಾಯಿಯನ್ನು ತಿನ್ನಲು ಅಹಾರ ಕೇಳಿದ್ದಾಳೆ. ಇದರಿಂದ ಕೋಪಗೊಂಡ ಮಹಿಳೆ ಬಾಣಲೆಯಲ್ಲಿ ಕುದಿಯುತ್ತಿದ್ದ ಎಣ್ಣೆಯನ್ನು ಬಾಲಕಿಯ ಮೇಲೆ ಎರಚಿದ್ದಾಳೆ. ಇಷ್ಟಲ್ಲದೇ, ಆಕೆಯ ಗುಪ್ತಾಂಗಕ್ಕೂ ಸುಡುವ ಎಣ್ಣೆಯನ್ನು ಸುರಿದಿದ್ದಾಳೆ.
ಇದರಿಂದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಮನೆಗೆ ಬಂದ ಪತಿ ಮಗಳ ಪರಿಸ್ಥಿತಿ ಕಂಡು ವಿಚಾರಿಸಿದಾಗ ಕೈತಪ್ಪಿ ಅವಳ ಮೇಲೆ ಚಹಾ ಬಿದ್ದಿದೆ ಎಂದು ಮಹಿಳೆ ಸುಳ್ಳು ಹೇಳಿದ್ದಾಳೆ. ಬಳಿಕ ಬಾಲಕಿಯನ್ನು ವಿಚಾರಿಸಿದಾಗ ತನ್ನ ಮೇಲಿನ ಕೋಪದಿಂದ ಸುಡುವ ಎಣ್ಣೆಯನ್ನು ಹಾಕಿದ್ದಾಳೆ ಎಂದು ತಿಳಿಸಿದ್ದಾಳೆ. ಇದನ್ನರಿತ ಮಹಿಳೆ ತವರು ಮನೆಗೆ ಪಲಾಯನ ಮಾಡಿದ್ದಾಳೆ.
ಪತಿಯಿಂದ ದೂರು, ಬಂಧನ: ಮಗಳ ಮೇಲೆ ಮಲತಾಯಿಯ ದೌರ್ಜನ್ಯದ ವಿರುದ್ಧ ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಹಾರ ಕೇಳಿದ ತನ್ನ ಮಗಳ ಮೇಲೆ ಸುಡುವ ಎಣ್ಣೆ ಹಾಕಿ ಗಾಯಗೊಳಿಸಿದ್ದಾಳೆ. ಅಲ್ಲದೇ, ಅವಳನ್ನು ಹೊಡೆದು ಚಿತ್ರಹಿಂಸೆ ನೀಡಲಾಗಿದೆ ಎಂದು ಬಾಲಕಿ ತಿಳಿಸಿದ್ದಾಳೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ತವರು ಮನೆಯಲ್ಲಿ ಬಂಧಿಸಿದ್ದಾರೆ. ಗಾಯಗೊಂಡ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಓದಿ: ಕೈಮುಗಿದು ಬೇಡಿಕೊಂಡರೂ ಬಿಡದ ಪಾಪಿ.. ಹೆತ್ತಮ್ಮನಿಗೆ ಬೆಲ್ಟ್ನಿಂದ ಥಳಿಸಿದ ಮಗ!