ದಿಂಡಿಗಲ್(ತಮಿಳುನಾಡು): ಕೆಲ ವೈಯಕ್ತಿಕ ನಂಬಿಕೆಗಳು ಎಂಥವರ ಮೇಲೆ ಕೂಡಾ ದುಷ್ಪರಿಣಾಮ ಬೀರಬಲ್ಲವು. ಮಂತ್ರ ವಿದ್ಯೆ, ತಂತ್ರ ವಿದ್ಯೆಗಳ ಹೆಸರಿನಲ್ಲಿ ಸಾಕಷ್ಟು ಅಪರಾಧಗಳು ಆಗಾಗ ನಡೆಯುತ್ತಿರುತ್ತವೆ. ತಮಿಳುನಾಡಿನ ದಿಂಡಿಗಲ್ನಲ್ಲಿ ಇಂಥಹದ್ದೇ ಘಟನೆಯೊಂದು ನಡೆದಿದ್ದು, ನಾಲ್ಕು ತಿಂಗಳ ಗಂಡು ಮಗುವನ್ನು ತಾಯಿಯೊಬ್ಬಳು ನದಿಗೆ ಎಸೆದು ಕೊಂದಿದ್ದಾಳೆ. ಮಗುವನ್ನು ಕೊಂದ ಬಗ್ಗೆ ತಾಯಿಯನ್ನು ವಿಚಾರಣೆ ನಡೆಸಿದರೆ, 'ರಾಶಿಭವಿಷ್ಯದ ಪ್ರಕಾರ ಮಗುವಿನ ಸಮಯ ಸರಿಯಿರಲಿಲ್ಲ. ಹಾಗಾಗಿ ಕೊಂದಿದ್ದೇನೆ' ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ದಿಂಡಿಗಲ್ ಜಿಲ್ಲೆಯ ಪಳನಿ ಸಮೀಪದ ರಾಜಪುರಂ ಪಂಚಾಯತ್ನ ಗ್ರಾಮದಲ್ಲಿ ಮಹೇಶ್ವರನ್ ಮತ್ತು ಲತಾ ದಂಪತಿ ವಾಸ ಮಾಡುತ್ತಿದ್ದು, ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಮೊದಲನೇ ಗಂಡು ಮಗುವಿಗೆ ಈಗ ಮೂರು ವರ್ಷ. ಎರಡನೇ ಮಗುವಿಗೆ ಕೇವಲ ನಾಲ್ಕು ತಿಂಗಳಾಗಿದ್ದು, ಅದರ ಹೆಸರು ಗೋಕುಲ್. ಮಾರ್ಚ್ 23ರಂದು ಮಹೇಶ್ವರನ್ ಕೆಲಸಕ್ಕೆ ತೆರಳಿದಾಗ ಲತಾ ಗೋಕುಲ್ನನ್ನು ತೆಗೆದುಕೊಂಡು ಪಾಲಾರು-ಪೊರುಂದಲಾರು ನದಿಯ ಜಲಾಶಯಕ್ಕೆ ಎಸೆದು, ಏನೂ ನಡೆದೇ ಇಲ್ಲವೆಂಬಂತೆ ವಾಪಸಾಗಿದ್ದಾಳೆ.
ಮಗುವನ್ನು ಸ್ಥಳೀಯರೇ ರಕ್ಷಿಸಿ, ಪಳನಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಪರೀಕ್ಷಿಸಿದ ವೈದ್ಯರು, ಮಗು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ನಂತರ ಈ ವಿಚಾರ ಪಳನಿ ಪೊಲೀಸರಿಗೆ ತಲುಪಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಗುವಿನ ಪೋಷಕರನ್ನು ಗುರುತಿಸಿ, ವಿಚಾರಣೆ ನಡೆಸಿದಾಗ ಮೊದಲಿಗೆ ಲತಾ ಅನುಮಾನಾಸ್ಪದವಾಗಿ ಉತ್ತರ ನೀಡಿದ್ದಾಳೆ. ನಂತರ ಗಂಭೀರ ವಿಚಾರಣೆ ನಡೆಸಿದಾಗ, ಮಗನ ರಾಶಿ ಭವಿಷ್ಯ ಸರಿಯಿರಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ. ಈ ಕುರಿತು ಇನ್ನೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಜಾರ್ಖಂಡ್ನ ಮಾಜಿ ಸಚಿವ ಯೋಗೇಂದ್ರ ಸಾವೋ, ಮಾಜಿ ಶಾಸಕಿಗೆ 10 ವರ್ಷ ಜೈಲು ಶಿಕ್ಷೆ