ಚಿತ್ತೂರು: ಮೂಢನಂಬಿಕೆಗೆ ಮಾರು ಹೋದ ವಿದ್ಯಾವಂತ ತಂದೆ - ತಾಯಿ ತನ್ನ ಹೆತ್ತ ಮಕ್ಕಳನ್ನು ಬಲಿ ಪಡೆದಿರುವ ಅಮಾನವೀಯ ಘಟನೆ ಮದನಪಲ್ಲೈ ಗ್ರಾಮದ ಅಂಕಿಶೆಟ್ಟಿಪಲ್ಲೈ ಗ್ರಾಮದಲ್ಲಿ ಹೊರವಲಯದಲ್ಲಿ ನಡೆದಿದೆ.
ವಿದ್ಯಾವಂತ ತಂದೆ-ತಾಯಿಯಿಂದ ಇದೆಂಥಾ ಕೆಲಸ?
ಮದನಪಲ್ಲೈ ಸರ್ಕಾರಿ ಮಹಿಳಾ ಡಿಗ್ರಿ ಕಾಲೇಜ್ನಲ್ಲಿ ವೈಸ್ ಪ್ರಿನ್ಸಿಪಲ್ ಆಗಿ ಎನ್. ಪುರುಷೋತ್ತಮ್ನಾಯಡು ಕಾರ್ಯ ನಿರ್ವಹಿಸುತ್ತಿದ್ದರು. ಆತನ ಪತ್ನಿ ಪದ್ಮಜಾ ವಿದ್ಯಾಸಂಸ್ಥೆಯೊಂದರಲ್ಲಿ ಕರಸ್ಪಾಂಡೆಂಟ್ ಮತ್ತು ಪ್ರಿನ್ಸಿಪಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ಪಾಠ, ಶಿಸ್ತು ಕಲಿಸಬೇಕಾದ ಇವರು ಅವಿದ್ಯಾವಂತ ಕೆಲಸ ಮಾಡಿ ಜೈಲು ಪಾಲಾಗಿದ್ದಾರೆ.
ಮುದ್ದಾದ ಹೆಣ್ಮಕ್ಕಳ ಭವಿಷ್ಯವೇ ಹಾಳು
ಪುರಷೋತ್ತಮ್ ಮತ್ತು ಪದ್ಮಜ ದಂಪತಿಗೆ ಇಬ್ಬರು ಮುದ್ದಾದ ಹೆಣ್ಮಕ್ಕಳು. ಅವರು ಸಹ ವಿದ್ಯಾವಂತರು. 27 ವರ್ಷದ ಅಲೇಖ್ಯ ಬೋಪಾಲ್ದಲ್ಲಿ ಪಿಜಿ ಮಾಡುತ್ತಿದ್ದರು. 22 ವರ್ಷದ ಸಾಯಿದಿವ್ಯ ಬಿಬಿಎ ಪದವಿ ಮುಗಿಸಿ, ಎ.ಆರ್ ರೆಹಮಾನ್ ಮ್ಯೂಸಿಕ್ ಅಕಾಡಮಿಯಲ್ಲಿ ಸಂಗೀತ ಕಲಿಯುತ್ತಿದ್ದರು.
ಹೊಸ ಮನೆಯಲ್ಲಿ ನಡೀತು ಕೊಲೆ...!
ಕಳೆದ ವರ್ಷ ಆಗಸ್ಟ್ನಲ್ಲಿ ಇವರೆಲ್ಲರು ನಗರದ ಹೊರವಲಯದಲ್ಲಿ ನಿರ್ಮಿಸಿದ ಹೊಸ ಮನೆಗೆ ತೆರಳಿದ್ದಾರೆ. ದೇವರ ಮೇಲೆ ಮತ್ತು ಮಾಟ ಮಂತ್ರದಲ್ಲಿ ಅಪಾರ ನಂಬಿಕೆಯುಳ್ಳ ಇವರ ಮನೆಯಲ್ಲಿ ಆಗಾಗ ಪೂಜೆ - ಪುನಸ್ಕಾರಗಳು ನಡೆಸುತ್ತಿದ್ದರೆಂದು ತಿಳಿದು ಬಂದಿದೆ. ಈ ಭಾನುವಾರವೂ ಸಹ ಮನೆಯಲ್ಲಿ ಪೂಜೆಗಳನ್ನ ನಡೆಸಿದ್ದಾರೆಂಬುದು ನೆರೆಹೊರೆಯವರು ಹೇಳುವ ಮಾತು.
ಮಕ್ಕಳಿಬ್ಬರನ್ನು ಕೊಂದ ಮಹಾತಾಯಿಗೆ ಸಿಕ್ಕಿತಾ ಮೋಕ್ಷ!?
ಭಾನುವಾರ ಮನೆಯಲ್ಲಿ ಪೂಜೆ ನಡೆಸಿದ ಬಳಿಕ ತಂದೆ-ತಾಯಿ ಮಕ್ಕಳಿಬ್ಬರನ್ನು ಪೂಜೆ ರೂಮ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಅವರಿಗೂ ಪೂಜೆ ಮಾಡಿದ್ದಾರೆ. ಮಗಳೊಬ್ಬಳಿಗೆ ತ್ರಿಶೂಲದಿಂದ ಚುಚ್ಚಿ ಕೊಲೆ ಮಾಡಿದ್ದಾರೆ. ಬಳಿಕ ಹಿರಿಯ ಮಗಳ ಬಾಯಿಯಲ್ಲಿ ರಾಗಿ ಲೋಟವಿಟ್ಟು ಡಂಬಲ್ಸ್ನಿಂದ ಹೊಡೆದು ಸಾಯಿಸಿದ್ದಾರೆ.
ಹೀಗೆ ಬೆಳಕಿಗೆ ಬಂತು ಘಟನೆ
ಮಕ್ಕಳನ್ನು ಕೊಲೆ ಮಾಡಿದ ಬಳಿಕ ಈ ವಿಷಯವನ್ನು ಪುರಷೋತ್ತಮ್ ನಾಯಡು ತಾನು ಕೆಲಸ ಮಾಡುತ್ತಿದ್ದ ಕಾಲೇಜಿನ ಅಧ್ಯಾಪಕರೊಬ್ಬರಿಗೆ ತಿಳಿಸಿದ್ದಾರೆ. ಕೂಡಲೇ ಆ ಅಧ್ಯಾಪಕ ಘಟನಾಸ್ಥಳಕ್ಕೆ ತೆರಳಿ ಗಮನಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ತಿಳಿಸಿದರು.
ಪೊಲೀಸರ ದೌಡು
ಸುದ್ದಿ ತಿಳಿದ ತಕ್ಷಣವೇ ರಾತ್ರೋರಾತ್ರಿ ಘಟನಾಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದರು. ಮದನಪಲ್ಲೈ ಡಿಎಸ್ಪಿ ರವಿ ಮನೋಹರ್ಚಾರಿ, ಸಿಐ ಶ್ರೀನಿವಾಸಲು, ಎಸೈಗಳಾದ ದಿಲೀಪ್ಕುಮಾರ್, ರಮಾದೇವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ಕೈಗೊಂಡಿದ್ದಾರೆ.
ಮೂಢನಂಬಿಕೆ...?
ಹತ್ಯೆಗೆ ಗುರಿಯಾದವರು, ಕೊಲೆ ಮಾಡಿದವರು ಸಂಪೂರ್ಣ ದೈವಭಕ್ತಿಯಲ್ಲಿ ಲೀನರಾಗಿದ್ದಾರೆ. ಅವರು ತಮ್ಮ ಮಕ್ಕಳು ಮತ್ತೆ ಬದುಕಿ ಬರುತ್ತಾರೆಂದು ತಿಳಿದು ಕೊಲೆ ಮಾಡಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಎಸ್ಪಿ ಹೇಳಿದ್ದಾರೆ.
ತಾಯಿ ಪದ್ಮಜಾ ಮಕ್ಕಳಿಬ್ಬರನ್ನು ಹೊಡೆದು ಸಾಯಿಸುವಾಗ ತಂದೆ ಪುರಷೋತ್ತಮ್ ಘಟನಾಸ್ಥಳದಲ್ಲೇ ಇದ್ದರು ಎಂದು ತಿಳಿದು ಬಂದಿದೆ. ತಂದೆ-ತಾಯಿ ಸಹ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಹೇಳಲಾಗಿದೆ. ಪೋಷಕರು ಇಬ್ಬರೂ ವಿದ್ಯಾವಂತರಾಗಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಮಾಚಾರದ ವ್ಯಸನಕ್ಕೊಳಗಾಗಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಘಟನೆಯ ವಿವರವನ್ನು ನೀಡಿದ್ದಾರೆ.