ಧಮತಾರಿ(ಛತ್ತೀಸ್ಗಢ): ದಿನಗಳು ಕಳೆದಂತೆ ಸಮಾಜ ಬದಲಾಗುತ್ತಿದೆ. ಚಿಕ್ಕ ವಯಸ್ಸಿನ ವಿಧವೆಯರು ಸಹ ತಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಅದರಂತೆಯೇ ಅವರ ಅತ್ತೆ-ಮಾವಂದಿರು ಮತ್ತು ಪೋಷಕರು ಸಹ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಅತ್ತೆಯೊಬ್ಬರು ಮಗ ನಿಧನನಾದ ಬಳಿಕ ತನ್ನ ಸೊಸೆಯನ್ನು ಬೇರೆ ವ್ಯಕ್ತಿಯ ಜೊತೆಗೆ ಎರಡನೇ ಮದುವೆ ಮಾಡಿಕೊಟ್ಟಿರುವ ವಿಶೇಷ ಘಟನೆ ಬೆಳಕಿಗೆ ಬಂದಿದೆ.
32 ವರ್ಷದ ಕೃತಿಲತಾ ಸಿನ್ಹಾ ಮತ್ತು 40 ವರ್ಷದ ದುರ್ಗೇಶ್ ಸಿನ್ಹಾ ಅವರು ಧಮ್ತಾರಿಯ ರಿಸೈ ಪಾರಾದ ನಾಗೇಶ್ವರ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಎರಡು ವರ್ಷಗಳ ಹಿಂದೆ ಕೃತಿ ಅವರ ಪತಿ ಗಜೇಂದ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಕೃತಿ ತಮ್ಮ 5 ವರ್ಷದ ಮಗುವಿನೊಂದಿಗೆ ಒಂಟಿಯಾಗಿ ವಾಸಿಸುತ್ತಿದ್ದರು. ಎರಡೂವರೆ ವರ್ಷಗಳ ಹಿಂದೆ ಭಿಲಾಯಿ ನಿವಾಸಿ ದುರ್ಗೇಶ್ ಅವರ ಪತ್ನಿ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದರು.
ಕೃತಿಲತಾ ತಮ್ಮ ಉಳಿದ ಜೀವನವನ್ನು ಒಂಟಿಯಾಗಿ ಕಳೆಯಲು ಮನಸ್ಸು ಮಾಡಿದ್ದರು. ಆದರೆ, ಕೃತಿ ಅವರ ಅತ್ತೆ ಯಮುನಾ ದೇವಿ ಅವರು ತಮ್ಮ ಸೊಸೆಗೆ ಮರುಮದುವೆ ಮಾಡಲು ನಿರ್ಧರಿಸಿದ್ದರು. ಯಮುನಾ ದೇವಿಗೆ ಕೃತಿಯನ್ನು ಮನವೊಲಿಸುವುದು ಮತ್ತು ನಂತರ ಸಮಾಜವು ಈ ವಿಧವಾ ವಿವಾಹವನ್ನು ಒಪ್ಪಿಕೊಳ್ಳುವಂತೆ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಹೇಗೋ ಕೃತಿ ಅವರ ಮನವೊಲಿಸುವಲ್ಲಿ ಯಶಸ್ವಿಯಾದ ಅತ್ತೆ ಯಮುನಾ ಅವರು ತಾಯಿಯ ಸ್ಥಾನದಲ್ಲಿ ನಿಂತು ಮರು ಮದುವೆ ಮಾಡಿಸಿದರು.
ಓದಿ: ವರ ಗಡ್ಡ ಬಿಡುವಂತಿಲ್ಲ, ಅದ್ಧೂರಿ ಮದುವೆ ಮಾಡಂಗಿಲ್ಲ.. ವಿವಾಹಕ್ಕೆ ನಿಯಮ ರೂಪಿಸಿದ ಸಮುದಾಯಗಳು
ಎರಡನೇ ಮದುವೆಯಿಂದ ಖುಷಿಯಾಗಿದ್ದೇನೆ. ಎರಡನೇ ಮದುವೆಗೆ ನನ್ನ ಅತ್ತೆ ಕೇಳಿದಾಗ ನಾನು ಮೊದಲು ಸಿದ್ಧಳಾಗಿರಲಿಲ್ಲ. ಸಮಯ ಹಿಡಿಯಿತು. ಆದರೆ ನಂತರ ನಮ್ಮ ಅತ್ತೆಯ ಒತ್ತಾಯದ ಮೇರೆಗೆ ನಾನು ಎರಡನೇ ಮದುವೆಗೆ ಒಪ್ಪಿಕೊಂಡೆ ಎಂದು ವಧು ಕೃತಿಲತಾ ಸಿನ್ಹಾ ತಮ್ಮ ಮನದಾಳದ ಮಾತನ್ನು ಹೇಳಿದರು.
ನಾನು ಭಿಲಾಯಿ ಸ್ಟೀಲ್ ಪ್ಲಾಂಟ್‌ನಲ್ಲಿ ಕೆಲಸ ಮಾಡುತ್ತೇನೆ. ನನ್ನ ಮೊದಲ ಹೆಂಡತಿ ತೀವ್ರ ಅನಾರೋಗ್ಯದಿಂದ ನಿಧನರಾದರು. ಒಂಟಿ ವ್ಯಕ್ತಿಯ ಜೀವನವು ನೋವಿನಿಂದ ಕೂಡಿದೆ. ವಯಸ್ಸಾದಂತೆ ಸಂಗಾತಿಯ ಅಗತ್ಯವಿರುತ್ತದೆ. ಅದಕ್ಕಾಗಿಯೇ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ವರ ದುರ್ಗೇಶ್ ಸಿನ್ಹಾ ಹೇಳಿದ್ದಾರೆ.
ನನ್ನ ಮಗ ಈ ಜಗತ್ತಿನಲ್ಲಿ ಇಲ್ಲ. ಆತ ಇಹಲೋಕ ತ್ಯಜಿಸಿದ್ದಾನೆ. ನನ್ನ ಸೊಸೆಗೆ ಐದು ವರ್ಷದ ಮಗುವಿದೆ. ಮಗುವಿಗೆ ಉಜ್ವಲ ಭವಿಷ್ಯ ನೀಡಬೇಕಾದ ಕರ್ತವ್ಯ ಸಹ. ಆದ್ದರಿಂದ ನಾನು ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಯಮುನಾ ದೇವಿ ಸಿನ್ಹಾ ಅವರು ಹೇಳಿದರು. ಯಮುನಾ ದೇವಿಯವರ ಈ ಆದರ್ಶ ವಿಚಾರ ಮತ್ತು ನಡೆ ಸಮಾಜಕ್ಕೆ ಮಾದರಿಯಾಗಬಲ್ಲುದು. ವಿಧವೆ ಮತ್ತು ವಿಧುರನಿಗೆ ಮದುವೆ ಮಾಡಿಸುವ ಮೂಲಕ ಹೃದಯ ಶ್ರೀಮಂತಿಕೆ ಮೆರೆದಿರುವ ಅವರಿಗೆ ಸಲಾಂ ಹೇಳೋಣ..