ವಿಲ್ಲುಪುರಂ (ತಮಿಳುನಾಡು): ಮಹಿಳೆಯೊಬ್ಬಳು ತನ್ನ ಎರಡು ವರ್ಷದ ಗಂಡು ಮಗುವಿನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಲ್ಲದೇ, ಕೃತ್ಯದ ದೃಶ್ಯವನ್ನು ಚಿತ್ರೀಕರಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಾಯಿ ವರ್ತನೆಯನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮಧುರ-ಮೆತ್ತೂರು ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ನಿವಾಸಿ ವಡಿವಾಜಗನ್ ಎಂಬಾತ 5 ವರ್ಷಗಳ ಹಿಂದೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕರಂಪಳ್ಳಿ ಗ್ರಾಮದ ತುಳಸಿ (23) ಎಂಬಾಕೆಯನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ಹಾಗೂ ಎರಡು ವರ್ಷದ ಗಂಡು ಮಕ್ಕಳಿದ್ದಾರೆ. ಪತಿ-ಪತ್ನಿನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗಿದ್ದು, ಇದೇ ಸಿಟ್ಟನ್ನು ಮಗು ಮೇಲೆ ತೋರಿಸಿಕೊಂಡಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಮಕ್ಕಳ ನೋಡಲು ಬಿಡದ ಕೋಪ; ಪತ್ನಿ ಕೊಲೆಗೈದು ಶವ ಹೂತಿಟ್ಟ ಪತಿ
ಗಂಡ ಮನೆಯಲ್ಲಿಲ್ಲದ ವೇಳೆ ಕಿರಿಯ ಮಗುವನ್ನು ತೀವ್ರವಾಗಿ ಥಳಿಸಿದ್ದಾಳೆ. ಅಲ್ಲದೇ ಇದನ್ನು ಮೊಬೈಲ್ನಲ್ಲಿ ಸೆರೆಹಿಡಿದು ವಿಡಿಯೋ ಮಾಡಿದ್ದಾಳೆ. ಗಾಯಗೊಂಡ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿ ನೀಡಿದ ದೂರಿನ ಮೇರೆಗೆ ಪೊಲೀಸರು ತುಳಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ತನ್ನ ತವರು ಮನೆಗೆ ಹೋಗಿರುವ ಆರೋಪಿ ತುಳಸಿಯನ್ನು ಬಂಧಿಸಲು 5 ಜನರ ಪೊಲೀಸ್ ತಂಡ ಆಂಧ್ರಕ್ಕೆ ತೆರಳಿದೆ.