ಇಡುಕ್ಕಿ (ಕೇರಳ) : ಇಡುಕ್ಕಿ ಜಿಲ್ಲೆಯ ಉಪ್ಪುತಾರಾದ ಕೈತಪಥಲ್ ಎಂಬಲ್ಲಿ ತಾಯಿ ಮತ್ತು ಏಳು ವರ್ಷದ ಬಾಲಕ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಲಿಜಾ ಟಾಮ್ ಮತ್ತು ಆಕೆಯ ಮಗ ಬೆನ್ ಟಾಮ್ ಎಂದು ಗುರುತಿಸಲಾಗಿದೆ. ಲಿಜಾ ಟಾಮ್ ಅವರ 29 ದಿನಗಳ ಮಗು ಸಾವನ್ನಪ್ಪಿತ್ತು. ಹಾಗಾಗಿ ತನ್ನ ಮಗುವಿನ ಸಾವಿನಿಂದ ಲಿಜಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕ ಪರೀಕ್ಷೆಯಿಂದ ತಿಳಿದು ಬಂದಿದೆ.
ಕುಟುಂಬದ ಸದಸ್ಯರು ಚರ್ಚ್‌ಗೆ ತೆರಳಿದ್ದಾಗ ದುಡುಕಿನ ನಿರ್ಧಾರ: ಕೈತಪಠಾಲ್ ನಿವಾಸಿ ಲೀಜಾ (38) ಮತ್ತು ಅವರ ಹಿರಿಯ ಮಗ ಬೆನ್ ಟಾಮ್ ಅವರು ಗುರುವಾರ ಬೆಳಗ್ಗೆ ತಮ್ಮ ಮನೆಯ ಆವರಣದಲ್ಲಿರುವ ಬಾವಿಗೆ ಹಾರಿದ್ದಾರೆ. ಸ್ಥಳೀಯ ಮೂಲಗಳ ಪ್ರಕಾರ, ಬೆಳಿಗ್ಗೆ 6 ಗಂಟೆ ಸುಮಾರಿಗೆ ಲಿಜಾ ಮತ್ತು ಬೆನ್ ಅವರನ್ನು ಮನೆಯಲ್ಲಿ ಬಿಟ್ಟು ಇತರ ಕುಟುಂಬ ಸದಸ್ಯರು ಚರ್ಚ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ.
ಮನೆಯ ಸಮೀಪದ ಬಾವಿಯೊಳಗೆ ಇಬ್ಬರ ಶವ ಪತ್ತೆ: ಎರಡು ದಿನಗಳ ಹಿಂದೆ ಲೀಜಾ ಅವರ ನವಜಾತ ಶಿಶು ಎದೆಹಾಲು ಕುಡಿದು ಉಸಿರುಗಟ್ಟಿ ಸಾವನ್ನಪ್ಪಿದ್ದು, ಬುಧವಾರ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿತ್ತು. ಘಟನೆಯ ನಂತರ ಲಿಜಾ ಖಿನ್ನತೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಮೃತರ ಅಂತ್ಯಕ್ರಿಯೆ: ಗುರುವಾರ ಬೆಳಗ್ಗೆ ಲಿಜಾ ಅವರ ಕುಟುಂಬ ಸದಸ್ಯರು ಚರ್ಚ್‌ನಿಂದ ಹಿಂತಿರುಗಿದಾಗ, ಇಬ್ಬರೂ ಕಾಣೆಯಾಗಿದ್ದರು. ಬಳಿಕ ಮನೆ ಸಮೀಪದ ಬಾವಿಯೊಳಗೆ ಅವರ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಅವರ ಅಂತ್ಯಕ್ರಿಯೆ ನಡೆಯಲಿದೆ.
ನಾಲ್ವರು ಮಕ್ಕಳು ನೀರಲ್ಲಿ ಮುಳುಗಿ ಸಾವು: ಇನ್ನೊಂದೆಡೆ ಬಿಹಾರದ ಅರ್ರಾ ಸಮೀಪದ ಸೋನ್ ನದಿಯಲ್ಲಿ ಈಜಲು ಹೋಗಿದ್ದ ನಾಲ್ವರು ಮಕ್ಕಳು ಮುಳುಗಿ ಮೃತಪಟ್ಟಿರುವ ದಾರುಣ ಪ್ರಕರಣ ನಿನ್ನೆ (ಮಾ. 15. ಬುಧವಾರ) ಅಜಿಮಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿತ್ತು.
ಮೃತ ಮಕ್ಕಳನ್ನು ನೂರ್‌ಪುರ ಗ್ರಾಮದ ವೀರೇಂದ್ರ ಚೌಧರಿ (12) ಅಮಿತ್ ಕುಮಾರ್, ದಿವಂಗತ ರಾಮ್ ರಾಜ್ ಚೌಧರಿ (8) ರೋಹಿತ್ ಕುಮಾರ್(10) ಶುಭಂ ಕುಮಾರ್ (10) ಎಂದು ಗುರುತಿಸಲಾಗಿದೆ. ಇದರಲ್ಲಿ ಇಬ್ಬರು ಮಕ್ಕಳು ಸೋದರ ಸಂಬಂಧಿಗಳಾಗಿದ್ದು, ಇನ್ನಿಬ್ಬರು ಅಕ್ಕಪಕ್ಕದ ಮನೆಯವರು ಎಂಬುದು ತಿಳಿದುಬಂದಿತ್ತು.
ಪೋಷಕರ ಆರೋಪ :ಸೋನ್‌ನದಿಯಲ್ಲಿ ಬೃಹತ್ ಹೊಂಡಗಳನ್ನು ಕೊರೆದು ಸೇತುವೆ ನಿರ್ಮಿಸಲಾಗಿತ್ತು. ಆಟದಲ್ಲಿ ತೊಡಗಿದ್ದ ಮಕ್ಕಳು ನೀರು ತುಂಬಿದ್ದ ಹೊಂಡಕ್ಕೆ ಜಾರಿಬಿದ್ದಿದ್ದಾರೆ. ಆಳಕ್ಕೆ ಮಕ್ಕಳು ಹೋಗಿದ್ದರಿಂದ ಮೇಲೆಯೂ ಬಾರದೆ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದರು. ಮಕ್ಕಳ ಸಾವಿಗೆ ಅಕ್ರಮ ಮರಳುಗಾರಿಕೆ ಮಾಫಿಯಾವೇ ಕಾರಣವಾಗಿದ್ದು, ಮರಳು ಮಾಫಿಯಾದಲ್ಲಿ ತೊಡಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದರು.
ಇದನ್ನೂ ಓದಿ : ನಾಲ್ವರು ಮಕ್ಕಳು ನೀರಲ್ಲಿ ಮುಳುಗಿ ಸಾವು: ಅಕ್ರಮ ಮರುಳು ಮಾಫಿಯಾ ವಿರುದ್ಧ ಆಕ್ರೋಶ