ಮೆದಕ್( ತೆಲಂಗಾಣ) : ಗೃಹಿಣಿಯೊಬ್ಬಳ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಬೆಂಕಿ ತಗಲಿದ್ದು, ಆ ಬೆಂಕಿ ಮಗುವಿಗೂ ವ್ಯಾಪಿಸಿದ ಪರಿಣಾಮ ತಾಯಿ ಮತ್ತು ಮಗಳು ಇಬ್ಬರು ಬೆಂಕಿ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಐದು ವರ್ಷಗಳ ಹಿಂದೆ ಗಟ್ಟಯ್ಯ ಮತ್ತು ರೇವತಿ (28) ವಿವಾಹವಾಗಿದ್ದರು. ಗಟ್ಟಯ್ಯ ಬೆಳಗ್ಗೆ 9 ಗಂಟೆಗೆ ಕೆಲಸಕ್ಕೆ ತೆರಳಿದ್ದಾರೆ. ಬೆಳಗ್ಗೆ 10.30 ರ ಸುಮಾರಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಆಕೆಯ ಸೀರೆಗೆ ಬೆಂಕಿ ತಗುಲಿದೆ. ನೋಡ -ನೋಡುತ್ತಿದ್ದಂತೆ ಬೆಂಕಿ ಆಕೆಯನ್ನು ಆವರಿಸಿದೆ. ಬಳಿಕ ಅಲ್ಲಿದ್ದ ಮಗಳು ಆದ್ಯಾಶ್ರೀ (3) ಗೂ ಬೆಂಕಿ ವ್ಯಾಪಿಸಿದೆ.
ಅಪಘಾತದಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಜೀವಂತವಾಗಿ ಸುಟ್ಟುಹೋಗಿದ್ದಾರೆ. ಮನೆಯ ಮಾಲೀಕರು ಮೃತ ಕುಟುಂಬಸ್ಥರಿಗೆ ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ದೌಡಾಯಿಸಿದ ಮೃತರನ್ನು ನೋಡಿದ ಪೋಷಕರು ಮತ್ತು ಆಕೆಯ ಪತಿ ಆಕ್ರಂದನ ಮುಗಿಲು ಮುಟ್ಟಿತು.
ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.