ಮಲಪ್ಪುರಂ(ಕೇರಳ): ಆಟೋದಲ್ಲಿ ಪತ್ನಿ ಹಾಗೂ ಮಕ್ಕಳನ್ನ ಹತ್ತಿಸಿಕೊಂಡ ಬಳಿಕ ಅದಕ್ಕೆ ಬೆಂಕಿ ಹಚ್ಚಿರುವ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದ್ದು, ಸುಟ್ಟು ಕರಕಲಾದ ಸ್ಥಿತಿಯಲ್ಲಿ ತಾಯಿ - ಮಗುವಿನ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ತೆರಳಿರುವ ಪೊಲೀಸರು ಈಗಾಗಲೇ ಮೃತದೇಹಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.
ಮಲಪ್ಪುರಂನ ಕೀಜತ್ತೂರು ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆಟೋದಲ್ಲಿ ಪತ್ನಿ ಹಾಗೂ ಮಗುವಿಗೆ ಕೂರಿಸಿಕೊಂಡಿರುವ ವ್ಯಕ್ತಿ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಇದರಿಂದ ಆತನಿಗೂ ಸುಟ್ಟ ಗಾಯಗಳಾಗಿದ್ದು, ಇದರ ಬೆನ್ನಲ್ಲೇ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಇದನ್ನೂ ಓದಿ: 2017ರ 'ಆಜಾದಿ ಮಾರ್ಚ್' ಪ್ರಕರಣ: ಶಾಸಕ ಜಿಗ್ನೇಶ್ ಮೇವಾನಿಗೆ 3 ತಿಂಗಳ ಜೈಲು ಶಿಕ್ಷೆ
ಮುಹಮ್ಮದ್ದದ ತನ್ನ ಪತ್ನಿ ಜಾಸ್ಮಿನ್ ಹಾಗೂ ಇಬ್ಬರು ಮಕ್ಕಳನ್ನ ಗೂಡ್ಸ್ ಆಟೋದಲ್ಲಿ ಹತ್ತಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದು, ಇದರ ಬೆನ್ನಲ್ಲೇ ಅದಕ್ಕೆ ಬೆಂಕಿ ಹಚ್ಚಿದ್ದಾನೆ. ಘಟನೆಯಲ್ಲಿ ಓರ್ವ ಬಾಲಕಿಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದೆ. ಈಗಾಗಲೇ ಗೂಡ್ಸ್ ಆಟೋದಿಂದ ತಾಯಿ- ಮಗು ಹಾಗೂ ಬಾವಿಯಿಂದ ವ್ಯಕ್ತಿಯ ಮೃತದೇಹ ಹೊರತೆಗೆಯಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು,ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದರ ಬಗ್ಗೆ ನೆರೆಹೊರೆಯವರ ವಿಚಾರಣೆ ನಡೆಸುತ್ತಿದ್ದಾರೆ.