ನವದೆಹಲಿ : 2022ರ ಕ್ಯಾಲೆಂಡರ್ ವರ್ಷಕ್ಕಾಗಿ ಇಂಡಿಯಾ ಅಟೊಮೊಬೈಲ್ ಇ-ಕಾಮರ್ಸ್ ರಿಪೋರ್ಟ್ ಅನ್ನು ಡ್ರೂಮ್ ಬಿಡುಗಡೆ ಮಾಡಿದೆ. ಭಾರತದ ಮುಂಚೂಣಿಯ ಅಟೊಮೊಬೈಲ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಡ್ರೂಮ್ ಮೇಲೆ ಮಾರಾಟಕ್ಕೆ 1.4 ಮಿಲಿಯನ್ಗೂ ಅಧಿಕ ವಾಹನಗಳು ಲಿಸ್ಟ್ ಆಗಿವೆ. ಡ್ರೂಮ್ ವರದಿಯ ಪ್ರಕಾರ ಕಾರುಗಳಲ್ಲಿ SUV ವಲಯವೇ ಪಾರಮ್ಯ ಸಾಧಿಸಿದ್ದು, ಇದರಲ್ಲಿ ಹ್ಯುಂಡೈ ಕ್ರೆಟಾ ಅತ್ಯಂತ ಜನಪ್ರಿಯ ಕಾರ್ ಆಗಿ ಹೊರಹೊಮ್ಮಿದೆ. ಇದರ ನಂತರದ ಸ್ಥಾನದಲ್ಲಿ ಕಿಯಾ ಸೆಲ್ಟೋಸ್ ಇದೆ. ಈ ಎರಡರ ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಟೊಯೊಟಾ ಇನ್ನೋವಾ ಕ್ರಿಸ್ಟಾ ಮತ್ತು ಟೊಯೊಟಾ ಫಾರ್ಚುನರ್ ಇವೆ. ಇನ್ನು ದ್ವಿಚಕ್ರ ವಾಹನಗಳ ವಲಯದಲ್ಲಿ ಬಜಾಜ್ ಪಲ್ಸರ್ ಅಗ್ರ ಆದ್ಯತೆಯಾಗಿ ಹೊರಹೊಮ್ಮಿದೆ. ಇದರ ನಂತರ ಸ್ಥಾನಗಳಲ್ಲಿ ಕ್ರಮವಾಗಿ ಹೀರೋ ಸ್ಪ್ಲೆಂಡರ್ ಪ್ಲಸ್, ಬಜಾಜ್ ಪಲ್ಸರ್ ಎನ್‌ಎಸ್, ಟಿವಿಎಸ್ ಅಪಾಚೆ ಆರ್‌ಟಿಆರ್ ಮತ್ತು ಹೋಂಡಾ ಸಿಬಿ ಶೈನ್ ಇವೆ.
ಐಷಾರಾಮಿ ವಾಹನಗಳ ವಿಭಾಗದಲ್ಲಿ, ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಹೆಚ್ಚು ಆದ್ಯತೆಯ ಐಷಾರಾಮಿ ಕಾರಾಗಿದೆ. ಜೀಪ್ ಕಂಪಾಸ್, ಮರ್ಸಿಡಿಸ್ ಬೆಂಜ್ ಸಿ ಕ್ಲಾಸ್ ಮತ್ತು ಬಿಎಂಡಬ್ಲ್ಯು 5 ಸಿರೀಸ್ ನಂತರದ ಸ್ಥಾನಗಳಲ್ಲಿವೆ. 2-ವೀಲರ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ ಹಾಟ್ ಫೇವರಿಟ್ ಆಗಿದೆ. ಹಾರ್ಲೆ ಡೇವಿಡ್ಸನ್ ಸ್ಟ್ರೀಟ್ 750 ಮತ್ತು ಕವಾಸಕಿ ನಿಂಜಾ ZX-10R ನಂತರದ ಸ್ಥಾನಗಳಲ್ಲಿವೆ.
ಕ್ಯಾಲೆಂಡರ್ ವರ್ಷ 2015 ರಿಂದ 2022 ರ ಅವಧಿಯಲ್ಲಿ ಅಟೊಮ್ಯಾಟಿಕ್ ಟ್ರಾನ್ಸಮಿಷನ್ ವಾಹನಗಳ ಬೇಡಿಕೆ ಏರುಗತಿಯಲ್ಲಿದೆ. ಈ ಅವಧಿಯಲ್ಲಿ ಇವುಗಳ ಬೇಡಿಕೆ ಶೇ 23 ರಿಂದ ಶೇ 33 ಕ್ಕೆ ಹೆಚ್ಚಾಗಿದೆ. ಚಾಲನೆಗೆ ಅನುಕೂಲ ಮತ್ತು ಹೆಚ್ಚಿನ ಇಂಧನ ದಕ್ಷತೆಯ ದೃಷ್ಟಿಯಿಂದ ಇವು ಜನಪ್ರಿಯತೆ ಗಳಿಸಿವೆ. ಇನ್ನು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದ ಬೆಳವಣಿಗೆಯು ಭಾರತದಲ್ಲಿನ ಒಟ್ಟು ವಾಹನ ಮಾರಾಟದಲ್ಲಿ ಶೇ 1 ರಷ್ಟಿದ್ದು ಸ್ಥಿರವಾಗಿದೆ. 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳ ಮೇಲೆ ನಿರ್ಬಂಧ ಹೇರುವ ವಾಹನ ಸ್ಕ್ರ್ಯಾಪೇಜ್ ನೀತಿಯ ಕಾರಣದಿಂದಾಗಿ ಡೀಸೆಲ್ ವಾಹನಗಳ ಪ್ರಮಾಣ 2021 ರಲ್ಲಿದ್ದ ಶೇ 60 ರಿಂದ 2022 ನಲ್ಲಿ ಶೇ 53 ಕ್ಕೆ ಕುಸಿದಿದೆ.
ಡ್ರೂಮ್ ಪ್ಲಾಟ್‌ಫಾರ್ಮ್ ಮೇಲೆ ಮಾರಾಟವಾಗುವ ಕಾರೊಂದರ ಸರಾಸರಿ ಬೆಲೆ 11.98 ಲಕ್ಷಗಳಾಗಿದ್ದು, ಬೈಕ್ ಮಾರಾಟದ ಸರಾಸರಿ ಬೆಲೆ 55 ಸಾವಿರ ರೂಪಾಯಿಯಾಗಿದೆ. ಡ್ರೂಮ್‌ನ ವಾರ್ಷಿಕ ಆಟೋಮೊಬೈಲ್ ಟ್ರೆಂಡ್ ವರದಿ CY 2022 ಕುರಿತು ಪ್ರತಿಕ್ರಿಯಿಸಿದ ಡ್ರೂಮ್ ಸಂಸ್ಥಾಪಕ ಮತ್ತು CEO ಸಂದೀಪ್ ಅಗರ್ವಾಲ್, 2022 ರ ಆಟೋಮೊಬೈಲ್ ಟ್ರೆಂಡ್ ವರದಿಯು ಒಟ್ಟಾರೆ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸ್ಥಿರವಾದ ಬೆಳವಣಿಗೆಯನ್ನು ತೋರಿಸುತ್ತದೆ. ವರದಿಯು ಆನ್‌ಲೈನ್ ಆಟೋಮೊಬೈಲ್ ಖರೀದಿಗೆ ಹೆಚ್ಚುತ್ತಿರುವ ಒಲವನ್ನು ಸೂಚಿಸುತ್ತದೆ ಮತ್ತು ಇದು ಮುಂಬರುವ ವರ್ಷಗಳಲ್ಲಿ ಇನ್ನೂ ಬೆಳೆಯಲಿದೆ. ಹಾಗೆಯೇ ಭವಿಷಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯು ಕ್ರಮೇಣವಾಗಿ ಆದರೆ ಸ್ಥಿರವಾಗಿ ಬೆಳೆಯಲಿದೆ ಎಂದರು.
1174 ನಗರಗಳಲ್ಲಿ ಡ್ರೂಮ್ ಅಸ್ತಿತ್ವವನ್ನು ಹೊಂದಿದೆ. ದಿಲ್ಲಿ, ಬೆಂಗಳೂರು, ಜೈಪುರ ಮತ್ತು ಹೈದರಾಬಾದ್‌ಗಳು 2022 ರಲ್ಲಿ ಆನ್‌ಲೈನ್ ವಹಿವಾಟಿಗೆ ದೊಡ್ಡ ಮಾರುಕಟ್ಟೆಯಾಗಿ ಹೊರಹೊಮ್ಮುವುದರೊಂದಿಗೆ ಆನ್‌ಲೈನ್ ಖರೀದಿಯಲ್ಲಿ ಡ್ರೂಮ್ ಪ್ಲಾಟ್‌ಫಾರ್ಮ್ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಆನ್‌ಲೈನ್ ಆಟೋಮೊಬೈಲ್ ಮಾರಾಟ ಮತ್ತು ಖರೀದಿಯು ಮೆಟ್ರೋ ನಗರಗಳಲ್ಲಿ ಪ್ರಚಲಿತದಲ್ಲಿದ್ದರೂ, ಈ ಪ್ರವೃತ್ತಿಯು ಭಿವಾನಿ, ಸಾಂಗ್ಲಿ, ಅಜ್ಮೀರ್, ಸಿರ್ಸಾ, ಗುರ್ಗಾಂವ್, ಫರಿದಾಬಾದ್, ಸೂರತ್ ಮತ್ತು ಘಾಜಿಯಾಬಾದ್‌ನಂತಹ ಇತರ ನಗರಗಳನ್ನು ಸಹ ಸೆಳೆಯುತ್ತಿದೆ. 2015 ಬಿಳಿ ಬಣ್ಣದ ಕಾರುಗಳ ಮೇಲೆ ಗ್ರಾಹಕರು ವಿಶೇಷ ಒಲವು ಹೊಂದಿರುವುದು ಕಂಡು ಬರುತ್ತಿದೆ.
ಇದನ್ನೂ ಓದಿ: ರಸ್ತೆ ನಿಯಮ ಮೀರಿ ಚಾಲನೆ: ಆನ್ ರೋಡ್ ಆಟೋಪೈಲಟ್ ವ್ಯವಸ್ಥೆಯ 3 ಲಕ್ಷ ಕಾರುಗಳನ್ನ ಹಿಂಪಡೆದ ಟೆಸ್ಲಾ