ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಚೀನಾದ ಆಕ್ರಮಣದಿಂದ ಸ್ಥಳೀಯರನ್ನು ರಕ್ಷಿಸಿದ್ದಕ್ಕಾಗಿ ಭಾರತೀಯ ಸೇನೆಯನ್ನು ಕಾಂಗ್ರೆಸ್ ಬುಧವಾರ ಶ್ಲಾಘಿಸಿದೆ. ಆದರೆ, ಗಡಿ ರಾಜ್ಯವನ್ನು ಸುರಕ್ಷಿತವಾಗಿರಿಸಲು ಕೇಂದ್ರ ಸರ್ಕಾರ ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಹೇಳಿದೆ.
ಗಡಿಯನ್ನು ರಕ್ಷಿಸುತ್ತಿರುವ ಭಾರತೀಯ ಸೇನೆಯ ಬಗ್ಗೆ ನಮಗೆ ಹೆಮ್ಮೆಯಿದೆ ಮತ್ತು ಚೀನಾದವರಿಗೆ ನಮ್ಮ ಒಂದಿಂಚು ಭೂಮಿ ಸಹ ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಆದರೆ, ಚೀನಾದ ಆಕ್ರಮಣದಿಂದ ಅರುಣಾಚಲ ಪ್ರದೇಶವನ್ನು ರಕ್ಷಿಸಲು ಕೇಂದ್ರ ಸರ್ಕಾರ ಹೆಚ್ಚಿನದನ್ನು ಮಾಡಬೇಕಾಗಿದೆ ಎಂದು ಅರುಣಾಚಲ ಪ್ರದೇಶ ಕಾಂಗ್ರೆಸ್ ಕಾರ್ಯಾಧ್ಯಕ್ಷ ಬೋಸಿರಾಮ್ ಸಿರಾಮ್ ಈಟಿವಿ ಭಾರತ್‌ಗೆ ತಿಳಿಸಿದರು.
ಕೇಂದ್ರ ಸರ್ಕಾರ ಈ ಸಮಸ್ಯೆ ಪರಿಹರಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ನನಗನಿಸುತ್ತದೆ. ಹೀಗಾಗಿ ಇಂಥ ಘಟನೆಗಳು ನಡೆಯುತ್ತಿವೆ. ಆಯಾ ಕಾಲದಲ್ಲಿದ್ದ ಸರಕಾರಗಳು ಒತ್ತುವರಿಗಳತ್ತ ಗಮನ ಹರಿಸುತ್ತಲೇ ಬಂದಿವೆ. ಬಿಜೆಪಿ ಸರಕಾರವೂ ಅಲ್ಲೊಂದು ಇಲ್ಲೊಂದು ಪ್ರಯತ್ನ ಮಾಡುತ್ತಿದ್ದರೂ, ಕೆಲ ಪ್ರಕಾರದಲ್ಲಿ ವಿಫಲವಾಗುತ್ತಿದೆ. ಸಮಸ್ಯೆಯನ್ನು ನಿಭಾಯಿಸಲು ಈ ಕಾರ್ಯವಿಧಾನಗಳು ಸಮರ್ಪಕವಾಗಿಲ್ಲ. ನಾವು ಈಗಿನ ತಂತ್ರಗಳನ್ನು ಮೀರಿ ಇಂಥ ಅತಿಕ್ರಮಣಗಳಿಗೆ ಕಡಿವಾಣ ಹಾಕಲು ಹೊಸ ತಂತ್ರ ರೂಪಿಸಬೇಕು ಎಂದು ಹೇಳಿದರು.
ಸಮಗ್ರವಾಗಿ ಪರಿಹರಿಸದೇ ಇದು ಬಗೆಹರಿಯಲ್ಲ: ಡಿಸೆಂಬರ್ 9 ರಂದು ತವಾಂಗ್ ಪ್ರದೇಶದಲ್ಲಿ ಭಾರತೀಯ ಸೈನಿಕರು ಚೀನಿ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿ ಕಾದಾಟ ನಡೆಸಿ, ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನು ಹಿಂದಕ್ಕೆ ತಳ್ಳಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಾಯಕನ ಪ್ರಕಾರ, ಚೀನಾದ ಪಿಎಲ್‌ಎಯಿಂದ ಇಂತಹ ಗಡಿ ಅತಿಕ್ರಮಣ ಮತ್ತು ಸ್ಥಳೀಯರನ್ನು ಅಪಹರಿಸುವುದು ಅರುಣಾಚಲ ಪ್ರದೇಶದಲ್ಲಿ ಸಾಮಾನ್ಯ ಸಮಸ್ಯೆಗಳಾಗಿವೆ ಮತ್ತು ಸಮಸ್ಯೆ ಸಮಗ್ರ ರೀತಿಯಲ್ಲಿ ಪರಿಹರಿಸುವವರೆಗೆ ಇವು ಕೊನೆಗೊಳ್ಳುವುದಿಲ್ಲ.
ಡಿಸೆಂಬರ್ 9 ರ ಘಟನೆ ಹೊಸದಲ್ಲ. ಗಡಿ ಪ್ರದೇಶಗಳಲ್ಲಿ ಸ್ಥಳೀಯರಿಗೆ ಕಿರುಕುಳ ನೀಡುವುದು ಪಿಎಲ್‌ಎ ಅಜೆಂಡಾ. ಅವರು ಅದನ್ನು ತಂತ್ರವಾಗಿ ಬಳಸುತ್ತಾರೆ. ಕಳೆದ ವರ್ಷ ಇಬ್ಬರು ಸ್ಥಳೀಯ ಯುವಕರನ್ನು ಪಿಎಲ್‌ಎ ಅಪಹರಿಸಿತ್ತು. ಈ ವಿಚಾರದಲ್ಲಿ ಭಾರತೀಯ ಸೇನೆ ಮಧ್ಯಪ್ರವೇಶಿಸಿದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಯಿತು. ಇಂಥ ಘಟನೆಗಳಿಂದ ಜನಸಾಮಾನ್ಯರು ತೀವ್ರ ಬೇಸರಗೊಂಡಿದ್ದಾರೆ ಎಂದು ಬೋಸಿರಾಮ್ ತಿಳಿಸಿದರು.
ತೀವ್ರ ಚಳಿಯ ಲಾಭ ಪಡೆದು ಅತಿಕ್ರಮಣ: ಆಗಾಗ ನಾವು ಗಡಿ ಪ್ರದೇಶಗಳಿಗೆ ನಿಯೋಗಗಳನ್ನು ಕೊಂಡೊಯ್ಯುತ್ತಿರುತ್ತೇವೆ. ನಾನು ಒಂದು ವಾರದ ಹಿಂದೆ ತವಾಂಗ್‌ಗೆ ಭೇಟಿ ನೀಡಿದ್ದೆ. ಆ ಪ್ರದೇಶ ಈಗ ಮಂಜುಗಡ್ಡೆಯ ದಪ್ಪ ಪದರದಿಂದ ಆವೃತವಾಗಿದೆ. ತೀವ್ರ ಚಳಿಯ ಲಾಭ ಪಡೆದು ಚೀನಿಯರು ತವಾಂಗ್ ಬಳಿ ಗಡಿ ಅತಿಕ್ರಮಣ ಮಾಡಲು ಯತ್ನಿಸಿದ್ದಾರೆ ಎಂದು ಸಿರಾಮ್ ಹೇಳಿದರು.
ಇದನ್ನೂ ಓದಿ: ಚೀನಾ ಗಡಿ ಸಮೀಪ ಭಾರತ-ಯುಎಸ್ ಸೇನೆಯಿಂದ ಸಮರಾಭ್ಯಾಸ: ವಿಡಿಯೋ