ನಾಂದೇಡ್ (ಮಹಾರಾಷ್ಟ್ರ): ಅಕ್ಟೋಬರ್ 1 ರಂದು ನಾಂದೇಡ್‌ನಲ್ಲಿರುವ ಡಾ. ಶಂಕರರಾವ್ ಚವಾಣ್ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 24 ರೋಗಿಗಳು ಸಾವನ್ನಪ್ಪಿದ್ದರು. ಮತ್ತೆ ಅಕ್ಟೋಬರ್ 2 ರಂದು ಇದೇ ಆಸ್ಪತ್ರೆಯಲ್ಲಿ 7 ರೋಗಿಗಳು ಮೃತಪಟ್ಟಿದ್ದಾರೆ. ಪ್ರಸ್ತುತ ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ನಾಂದೇಡ್‌ನ ಡಾ. ಶಂಕರರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ದಿನದಲ್ಲಿ ರೋಗಿಗಳ ಹೆಚ್ಚಳವಾಗಿದೆ.
ಆಸ್ಪತ್ರೆಯಲ್ಲಿ 76 ರೋಗಿಗಳ ಸ್ಥಿತಿ ಗಂಭೀರ: ಸರ್ಕಾರಿ ಅಧಿಕಾರಿಯೊಬ್ಬರ ಪ್ರಕಾರ, ಪ್ರಸ್ತುತ ಈ ಆಸ್ಪತ್ರೆಯಲ್ಲಿ 76 ರೋಗಿಗಳ ಸ್ಥಿತಿ ಗಂಭೀರವಾಗಿದೆ. ಸದ್ಯ ಸಾವಿನ ಸಂಖ್ಯೆಯು 31ಕ್ಕೆ ತಲುಪಿದೆ. ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 1ರ ವರೆಗೆ 24 ರೋಗಿಗಳು ಸಾವಿಗೀಡಾಗಿದ್ದಾರೆ. ಗಂಭೀರ ಸ್ಥಿತಿಯಲ್ಲಿದ್ದ 12 ನವಜಾತ ಶಿಶುಗಳು ನಾಂದೇಡ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿವೆ. ಹಾವು ಕಡಿತ, ವಿಷ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ಕೆಲವು ರೋಗಿಗಳು ಮೃತಪಟ್ಟಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಈ ಕುರಿತು ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಿತಿ ರಚಿಸಲಾಗುವುದು. ಈ ಸಮಿತಿಯು ಆಸ್ಪತ್ರೆಗೆ ತೆರಳಿ, ತನಿಖೆ ನಡೆಸಲಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯ ಸರ್ಕಾರವೇ ಹೊಣೆ- ಮಾಜಿ ಸಿಎಂ ಅಶೋಕ್ ಚವಾಣ್ ಆರೋಪ: ನಾಂದೇಡ್‌ನಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದ್ದು, ನಿನ್ನೆಯಿಂದ 7 ಮಂದಿ ರೋಗಿಗಳು ದುರದೃಷ್ಟವಶಾತ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರಲ್ಲಿ ನಾಲ್ವರು ಮಕ್ಕಳು ಸೇರಿದ್ದಾರೆ. ರಾಜ್ಯ ಸರ್ಕಾರವೇ ಈ ಹೊಣೆಯನ್ನು ಹೊರಬೇಕು ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಒತ್ತಾಯಿಸಿದರು.
ಡಾ.ಶಂಕರರಾವ್ ಚವ್ಹಾಣ ಸರ್ಕಾರಿ ಆಸ್ಪತ್ರೆ ಡೀನ್ ಆರ್.ಎಸ್. ವಕೋಡೆ ಪ್ರತಿಕ್ರಿಯಿಸಿ, ಔಷಧಿ ಕೊರತೆಯಿಂದ ರೋಗಿಗಳು ಸಾವನ್ನಪ್ಪಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಹಲವು ರೋಗಿಗಳು ಆಸ್ಪತ್ರೆಗೆ ಬಂದಿದ್ದಾರೆ ಎಂದು ಅವರು ತಿಳಿಸಿದರು. ತೆಲಂಗಾಣ ರಾಜ್ಯದಿಂದಲೂ ಅನೇಕ ರೋಗಿಗಳು ಬಂದಿದ್ದಾರೆ. ಆದರೆ, ವೈದ್ಯರು ರೋಗಿಗಳನ್ನು ಉಳಿಸಲು ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ವೈದ್ಯರ ಸಮಿತಿ ರಚಿಸಲಾಗುವುದು- ಸಚಿವ ಹಸನ್ ಮುಶ್ರಿಫ್: ನಾಂದೇಡ್‌ನ ಡಾ. ಶಂಕರರಾವ್ ಚವಾಣ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 24 ರೋಗಿಗಳ ಸಾವಿನ ಕುರಿತು ಮಾತನಾಡಿದ ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಸಚಿವ ಹಸನ್ ಮುಶ್ರಿಫ್ ಅವರು, ''ನಾವು ಸಂಪೂರ್ಣ ತನಿಖೆ ನಡೆಸುತ್ತೇವೆ. ಸಿಎಂ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಇದೇ ವಿಚಾರವಾಗಿ ವಿವರಣೆ ನೀಡಿದ್ದೇನೆ. ನಾನು ಆಸ್ಪತ್ರೆಗೆ ಭೇಟಿ ನೀಡುತ್ತೇನೆ. ವೈದ್ಯರ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಬಸ್, ಟ್ರಕ್ಗಳ ಅಡ್ಡಹಾಕಿ ಆಹಾರ ವಸೂಲಿ ಮಾಡುತ್ತಿರುವ ಗಜರಾಜ