ನವದೆಹಲಿ: ಅಜಂತಾ ಬ್ರ್ಯಾಂಡ್ ಗಡಿಯಾರ ತಯಾರಿಸುವ ಎಲೆಕ್ಟ್ರಿಕಲ್ ಅಪ್ಲಯನ್ಸಸ್ ಕಂಪನಿಯಾದ ಒರೇವಾ ಗ್ರೂಪ್ 15 ವರ್ಷಗಳ ಕಾಲ ಮೋರ್ಬಿ ಸೇತುವೆಯನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿತ್ತು ಎಂದು ನಗರಸಭೆ ಮುಖ್ಯಾಧಿಕಾರಿ ಸಂದೀಪಸಿನ್ಹ ಝಾಲಾ ಹೇಳಿದ್ದಾರೆ. ಮೋರ್ಬಿ ಸೇತುವೆ ಕುಸಿತ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 134ಕ್ಕೆ ಏರಿಕೆಯಾಗಿದೆ. ಕಳೆದ 10 ವರ್ಷಗಳಲ್ಲೇ ಅತಿ ಭೀಕರ ದುರ್ಘಟನೆಯಾಗಿರುವ ಮೋರ್ಬಿ ಸೇತುವೆ ಕುಸಿತದ ಬಗ್ಗೆ ಸರ್ಕಾರ ಕ್ರಿಮಿನಲ್ ತನಿಖೆಗೆ ಆದೇಶಿಸಿದೆ.
ಸೇತುವೆಯನ್ನು ಮತ್ತೆ ಆರಂಭಿಸುವ ಬಗ್ಗೆ ಅವರು ನಮಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಅಲ್ಲದೆ ನಾವು ಅವರಿಗೆ ಯಾವುದೇ ಫಿಟ್ನೆಸ್ ಸರ್ಟಿಫಿಕೇಟ್ ಕೂಡ ನೀಡಿರಲಿಲ್ಲ ಎಂದು ಝಾಲಾ ತಿಳಿಸಿದ್ದಾರೆ.
ಘಟನೆಯ ಕುರಿತು ಒರೇವಾ ಗ್ರೂಪ್ ಈವರೆಗೂ ಯಾವುದೇ ಹೇಳಿಕೆ ನೀಡದಿದ್ದರೂ, ಕಂಪನಿಯ ವಕ್ತಾರರೊಬ್ಬರು ಮಾತನಾಡಿದ್ದು, ಸೇತುವೆಯ ಮಧ್ಯಭಾಗದಲ್ಲಿದ್ದ ಹಲವಾರು ಜನ ಸೇತುವೆಯನ್ನು ಒಂದು ದಿಕ್ಕಿನಿಂದ ಇನ್ನೊಂದು ದಿಕ್ಕಿಗೆ ತೂಗಲಾರಂಭಿಸಿದ್ದರಿಂದ ಸೇತುವೆ ಕುಸಿದಿದೆ ಎಂದು ಹೇಳಿದ್ದಾರೆ.
ಒರೆವಾ ಸಿಎಫ್ಎಲ್ ಬಲ್ಬ್, ಗೋಡೆ ಗಡಿಯಾರಗಳು ಮತ್ತು ಇ-ಬೈಕ್‌ಗಳನ್ನು ತಯಾರಿಸುವ ಪ್ರಖ್ಯಾತ ಕಂಪನಿಯಾಗಿದೆ. ಈ ಕಂಪನಿ 100 ವರ್ಷಗಳಷ್ಟು ಹಳೆಯದಾದ ಸೇತುವೆ ನಿರ್ವಹಣೆಯ ಒಪ್ಪಂದವನ್ನು ಹೇಗೆ ಪಡೆದುಕೊಂಡಿತು ಎಂಬುದು ತಿಳಿದಿಲ್ಲ.
ಇದನ್ನೂ ಓದಿ: ಗುಜರಾತ್ ತೂಗು ಸೇತುವೆ ದುರಂತ: ಮೋರ್ಬಿಗೆ ನಾಳೆ ಪ್ರಧಾನಿ ಮೋದಿ ಭೇಟಿ