ಅಹಮದಾಬಾದ್(ಗುಜರಾತ್): ಗುಜರಾತ್ನ ಮೊರ್ಬಿ ಸೇತುವೆ ದುರಂತದಲ್ಲಿ 141 ಜನರು ಅನ್ಯಾಯವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಶತಮಾನಗಳಷ್ಟು ಹಳೆಯದಾದ ತೂಗು ಸೇತುವೆ ನವೀಕರಿಸಿದ ಕಂಪನಿಯ ವಿರುದ್ಧವೂ ಕ್ರಮ ಜರುಗಿಸಿ ಎಂದು ವಕೀಲರೊಬ್ಬರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಸಿದ್ದಾರೆ.
ಸೇತುವೆ ನವೀಕರಣ ಮಾಡಿ ಜನರಿಗೆ ಮುಕ್ತ ಮಾಡಿದ್ದ ಒರೆವಾ ಕಂಪನಿ ಮಾಲೀಕರು ಕೂಡ ಪ್ರಕರಣದಲ್ಲಿ ಭಾಗಿದಾರರು. ಇವರ ವಿರುದ್ಧ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ. ನ್ಯಾಯಾಂಗ ತನಿಖೆ ನಡೆಸಲು ಪಿಐಎಲ್ ಸಲ್ಲಿಕೆಯಾಗಿದ್ದರೂ, ಕಂಪನಿ ವಿರುದ್ಧ ಕ್ರಮ ಏಕಿಲ್ಲ ಎಂದು ವಕೀಲರು ಪ್ರಶ್ನಿಸಿದ್ದಾರೆ.
ಸೇತುವೆಯ ಮೇಲೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ಬಿಟ್ಟಿದ್ದರ ಬಗ್ಗೆಯೂ ಪ್ರಶ್ನಿಸಿರುವ ವಕೀಲರು ಗುಜರಾತ್ ಹೈಕೋರ್ಟ್‌ನಲ್ಲಿ ಮೊರ್ಬಿ ನಗರಪಾಲಿಕೆಯ ಅಧಿಕಾರಿಗಳು ಮತ್ತು ಒರೆವಾ ಕಂಪನಿಯ ಮಾಲೀಕರ ವಿರುದ್ಧ ಕ್ರಮ ಜಾರಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಲ್ಲಿ ಕಂಪನಿಯನ್ನು ಹೊಣೆ ಮಾಡುವ ಬದಲಾಗಿ ಅದರ ಸಿಬ್ಬಂದಿ ಮತ್ತು ಟಿಕೆಟ್ ನೀಡುವವರ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿದೆ. ತೂಗು ಸೇತುವೆಯ ಸಂಪೂರ್ಣ ಜಬಾವ್ದಾರಿ ಕಂಪನಿಯದ್ದಾಗಿದೆ. ಇದಕ್ಕೆ ಅನುಮತಿ ನೀಡಿದ ಮುನ್ಸಿಪಲ್ ಕಾರ್ಪೊರೇಷನ್‌ನ ಅಧಿಕಾರಿಗಳು ಕೂಡ ಇದಕ್ಕೆ ಹೊಣೆಗಾರರನ್ನಾಗಿ ಮಾಡಬೇಕು ಎಂದು ವಕೀಲರು ಹೈಕೋರ್ಟ್ಗೆ ಕೋರಿದ್ದಾರೆ.
ನಿನ್ನೆ ದುರಂತದ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನೂ ಮಾತನಾಡಿಸಿ ಧೈರ್ಯ ತುಂಬಿದ್ದರು.
ಓದಿ: ಮೋರ್ಬಿ ದುರಂತ: ನ್ಯಾಯಾಂಗ ತನಿಖೆಗಾಗಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ