ನವದೆಹಲಿ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣ ಸಂಬಂಧ ಪುಣೆಯ ಓರ್ವ ವ್ಯಕ್ತಿಯನ್ನು ದೆಹಲಿಯ ವಿಶೇಷ ದಳದ ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಈ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಎಂದು ಹೇಳಲಾಗುತ್ತಿದೆ.
ಈಗ ಬಂಧಿತ ಆರೋಪಿಯನ್ನು ಸಿದ್ದೇಶ್ ಹಿರಾಮನ್ ಕಾಮ್ಲೆ ಅಲಿಯಾಸ್ ಮಹಾಕಾಳ್ ಎಂದು ಗುರುತಿಸಲಾಗಿದೆ. ದೆಹಲಿಯ ವಿಶೇಷ ದಳ ಮತ್ತು ಮಹಾರಾಷ್ಟ್ರ ಪೊಲೀಸರ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸಲಾಗಿದೆ. ಈತ ಸಿಧು ಮೂಸೆವಾಲಾ ಅವರನ್ನು ಶೂಟ್ ಮಾಡಿದ ಆರೋಪಿಯ ಆಪ್ತನಾಗಿದ್ದಾನೆ ಎಂದು ಪೊಲೀಸ್ ಆಯುಕ್ತ ಎಚ್.ಎಸ್. ಧಲಿವಾಲ್ ತಿಳಿಸಿದ್ದಾರೆ.
ಅಲ್ಲದೇ, ಈ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳು ರಚಿಸಲಾಗಿದೆ. ಕೃತ್ಯ ಎಸಗಿದ 8 ಶೂಟರ್‌ಗಳನ್ನು ಗುರುತಿಸಲು ಭಾರತದಾದ್ಯಂತ ಹಲವಾರು ಗ್ಯಾಂಗ್ಸ್ಟರ್ಗಳನ್ನು ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ಲಾರೆನ್ಸ್ ಬಿಷ್ಣೋಯಿ ಎಂಬುದು ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ.
ಸದ್ಯ ಬಂಧಿತ ಆರೋಪಿ ಸಿದ್ದೇಶ್ ಜೊತೆಗೆ ಸಂಪರ್ಕ ಹೊಂದಿದ್ದ ಶೂಟರ್‌ನ ಹೆಸರನ್ನು ಅಧಿಕಾರಿಗಳು ಬಹಿರಂಗ ಪಡಿಸಿಲ್ಲ. ಆದಾಗ್ಯೂ, ಈತ ಶೂಟರ್‌ಗಳಲ್ಲಿ ಒಬ್ಬರೊಂದಿಗೆ ನೇರ ಸಂಪರ್ಕವನ್ನು ಹೊಂದಿದ್ದಾನೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ನಟ ಸಲ್ಮಾನ್ಗೆ ಜೀವ ಬೆದರಿಕೆ ಪತ್ರ ಯಾರು ಬರೆದಿದ್ದಾರೋ ಗೊತ್ತಿಲ್ಲ: ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ