ತಿರುವನಂತಪುರಂ (ಕೇರಳ): ನೈಋತ್ಯ ಮಾನ್ಸೂನ್ ಕೇರಳಕ್ಕೆ ಆಗಮಿಸಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಎಂದು ಖಚಿತಪಡಿಸಿದೆ. ಮುಂದಿನ ಮೂರು ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಮೇ 31ರಂದು ಮಾನ್ಸೂನ್ ಆಗಮನವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಮಾನ್ಸೂನ್ ಮಳೆಯ ಆಗಮನದಲ್ಲಿ 2 ದಿನಗಳ ವಿಳಂಬವಾಗಿದೆ. ತಡವಾಗಿಯಾದರೂ, ಮಾನ್ಸೂನ್ ಪ್ರವೇಶಿಸಿದ್ದು, ಕೇರಳದ ಮಧ್ಯ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.
ಪಥನಮತ್ತಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ, ಕಾಸರಗೋಡು, ಕಣ್ಣೂರು ಮತ್ತು ಕೋಝಿಕೋಡ್ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ಈ ಎಂಟು ಜಿಲ್ಲೆಗಳಲ್ಲಿ 64.5 ಮಿ.ಮೀ ನಿಂದ 115.5 ಮಿ.ಮೀ ಮಳೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಗಂಟೆಗೆ 40ರಿಂದ 50 ಕಿಲೋಮೀಟರ್ ವೇಗದಲ್ಲಿ ಪ್ರಬಲವಾದ ಗಾಳಿ ಬೀಸುತ್ತಿದ್ದು, ಮೀನುಗಾರರು ಸಮುದ್ರಕ್ಕೆ ಹೋಗಬಾರದು ಎಂದು ತಿಳಿಸಲಾಗಿದೆ.