ಮಥುರಾ: ಉತ್ತರ ಪ್ರದೇಶದ ಮಂಟ್ ಪೊಲೀಸ್ ಠಾಣಾ ವ್ಯಾಪ್ತಿಯ ಮಂಟ್ ಮೂಲಾ ಗ್ರಾಮದಲ್ಲಿ ಭಾನುವಾರ ಯುವಕನ ಮೇಲೆ ಮಂಗಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಯುವಕ ಮನೆಯ ಮೇಲ್ಛಾವಣಿಯಿಂದ ಕೆಳಗೆ ಬಿದ್ದಿದ್ದಾನೆ. ನಂತರ ಆತನನ್ನು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯುವಕನ ಪತ್ನಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ವಾಸ್ತವವಾಗಿ ಜಿಲ್ಲೆಯಲ್ಲಿ ಕೋತಿಗಳ ಭಯದಿಂದ ವಯೋವೃದ್ಧ ಮಹಿಳೆಯರು, ಮಕ್ಕಳು ಕೈಯಲ್ಲಿ ಕೋಲುಗಳಿಲ್ಲದೇ ಹೊರ ಬರಲಾಗದ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಮಂಗಗಳು ಆಗಾಗ ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸುತ್ತಿವೆ. ಮಂಗಗಳ ಕಾಟ ಎಷ್ಟಿದೆ ಎಂದರೆ ಇದುವರೆಗೆ ಸಾಕಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಮೂಲಾ ಗ್ರಾಮದ ನಿವಾಸಿ 32 ವರ್ಷದ ಮಾನವ್ ಅಲಿಯಾಸ್ ಮನ್ವೇಂದ್ರ ಎಂಬುವವರ ಮನೆಗೆ ಮಂಗಗಳ ಗುಂಪು ಇದ್ದಕ್ಕಿದ್ದಂತೆ ನುಗ್ಗಿದೆ. ಮನೆಯಿಂದ ಚಪ್ಪಲಿ ಎತ್ತಿಕೊಂಡು ತಾರಸಿಗೆ ತೆಗೆದುಕೊಂಡು ಹೋಗಿವೆ. ಕೋತಿಗಳಿಂದ ಚಪ್ಪಲಿಯನ್ನು ತೆಗೆದುಕೊಳ್ಳಲು ಅವರು, ಕೈಯಲ್ಲಿ ಕೋಲು ಹಿಡಿದು ಛಾವಣಿ ಮೇಲೆ ಹೋಗಿದ್ದಾರೆ. ಈ ವೇಳೆ ಕೋತಿಗಳ ಹಿಂಡು ಮಾನವ್ ಮೇಲೆ ದಾಳಿ ಮಾಡಿದ್ದು, ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಕಾಲು ಜಾರಿ ಛಾವಣಿಯಿಂದ ಕೆಳಗೆ ಬಿದ್ದಿದ್ದಾರೆ. ಮನೆಯವರು ಮಾನವ್ ಅವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದರೂ, ಅವರು ಬದುಕುಳಿಯಲಿಲ್ಲ.
ಇದನ್ನೂ ಓದಿ: ತಾಜ್ಮಹಲ್ ನೋಡಲು ಬಂದ ಸ್ಪೇನ್ ಪ್ರವಾಸಿಗರ ಮೇಲೆ ಮಂಗಗಳ ದಾಳಿ
ಇದೇ ವೇಳೆ ಮೃತ ಯುವಕನ ಪತ್ನಿ ನೀತು ಪೊಲೀಸರಿಗೆ ದೂರು ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.