ನವದೆಹಲಿ: ಮೋದಿ ಉಪನಾಮ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿ, ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಮರು ಅಫಿಡವಿಟ್ ಸಲ್ಲಿಸಿದ್ದು, 'ತಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಇಲ್ಲ' ಎಂದು ಹೇಳಿದ್ದಾರೆ. ಅಲ್ಲದೇ, ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿಯುವವರೆಗೆ ಬಾಕಿ ಉಳಿಸಿಕೊಳ್ಳಬೇಕು ಎಂದು ಕೋರಿದ್ದಾರೆ.
ಮಾಜಿ ಸಂಸದನ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿರುವ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ಸುಪ್ರೀಂಕೋರ್ಟ್ಗೆ ನೀಡಿರುವ ಉತ್ತರದಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚಿಸಲು ನಿರಾಕರಿಸಿದ್ದು 'ಅಹಂಕಾರ'ವನ್ನು ತೋರಿಸುತ್ತದೆ ಎಂದು ನಿಂದನಾತ್ಮಕ ಪದ ಬಳಕೆ ಮಾಡಿದ್ದಾರೆ. ನಾನು ಕ್ಷಮೆ ಕೇಳಬೇಕು ಎಂದುಕೊಂಡಿದ್ದರೆ, ಈ ಹಿಂದೆಯೇ ಕೇಳುತ್ತಿದ್ದೆ. ಈಗ ಅದರ ಪ್ರಶ್ನೆಯೇ ಬರುವುದಿಲ್ಲ ಎಂದು ಅಫಿಡವಿಟ್ನಲ್ಲಿ ಹೇಳಿದ್ದಾರೆ.
ತಮ್ಮ ವಿರುದ್ಧದ ಕೇಸ್ 'ಅಸಾಧಾರಣ'ವಾಗಿದೆ. ತಾವು ಯಾವುದೇ ಜಾತಿ ಆಧರಿತ ಹೇಳಿಕೆ ನೀಡಿ ನೋವುಂಟು ಮಾಡಿಲ್ಲ. ಅರ್ಜಿದಾರರನ್ನು ಯಾವುದೇ ತಪ್ಪಿಗಾಗಿ ಕ್ಷಮೆಯಾಚಿಸಲು ಜನರ ಪ್ರಾತಿನಿಧ್ಯ ಕಾಯ್ದೆಯನ್ನು ಉಲ್ಲೇಖ ಮಾಡುವುದು ನ್ಯಾಯಾಂಗ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ. ಹೀಗಾಗಿ ಕೋರ್ಟ್ ಇದನ್ನು ಮಾನ್ಯ ಮಾಡಬಾರದು. ತಾನು ತಪ್ಪಿತಸ್ಥನಲ್ಲ ಮತ್ತು ಶಿಕ್ಷೆ ಸಮರ್ಥವಾಗಿಲ್ಲ. ಕ್ಷಮೆಯಾಚಿಸಬೇಕಾಗಿದ್ದರೆ, ಅಪರಾಧವನ್ನು ಒಪ್ಪಿಕೊಳ್ಳಬೇಕಾದರೆ ಈ ಹಿಂದೆಯೇ ಮಾಡಿರುತ್ತಿದ್ದೆ ಎಂದು ಹೇಳಿದ್ದಾರೆ.
ಲೋಕಸಭೆ ಅಧಿವೇಶನ ಬಳಿಕ ವಿಚಾರಿಸಿ: ತಮ್ಮ ವಿರುದ್ಧದ ಕೇಸ್ನ ಮೇಲ್ಮನವಿ ಅರ್ಜಿಯನ್ನು ಲೋಕಸಭೆ ಅಧಿವೇಶನ ಮುಗಿದ ಬಳಿಕ ವಿಚಾರಣೆ ನಡೆಸಲು ಇದೇ ವೇಳೆ ರಾಹುಲ್ ಗಾಂಧಿ ಕೋರಿದ್ದಾರೆ. ಮುಂಗಾರು ಅಧಿವೇಶನ ನಡೆಯುತ್ತಿದೆ. ಇದರ ಬಳಿಕ ತಮ್ಮ ಮೇಲ್ಮನವಿಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಉಳಿದ ಅಧಿವೇಶನದ ಅವಧಿಯಲ್ಲಿ ಭಾಗಿಯಾಗಲು ತಾವು ಬಯಸಿದ್ದಾಗಿ ವಯನಾಡ್ ಕ್ಷೇತ್ರದ ಮಾಜಿ ಸಂಸದ ರಾಹುಲ್ ಗಾಂಧಿ ಕೋರ್ಟ್‌ಗೆ ತಿಳಿಸಿದ್ದಾರೆ.
ನಾಳೆ ವಿಚಾರಣೆ: ಇತ್ತ ಪ್ರಕರಣದ ಕುರಿತ ರಾಹುಲ್ರ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಆಗಸ್ಟ್ 4 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ. ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ತಮ್ಮ ವಿರುದ್ಧದ ಶಿಕ್ಷೆಯನ್ನು ತಡೆಹಿಡಿಯಬೇಕು ಎಂದು ಕೋರಿ ಜುಲೈ 7 ರ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ಸಂಸದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?: 2019ರ ಲೋಕಸಭೆಯ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ಭಾಷಣ ಮಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದರು. ಎಲ್ಲ ಕಳ್ಳರು ಮೋದಿ ಎಂಬ ಉಪನಾಮ ಹೇಗೆ ಹೊಂದಿದ್ದಾರೆ ಎಂದು ಪ್ರಶ್ನಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ: ರಾಹುಲ್ ಮೇಲ್ಮನವಿ ಕುರಿತು ಪ್ರತಿಕ್ರಿಯೆ ಸಲ್ಲಿಸಲು ಗುಜರಾತ್ ಸರ್ಕಾರ, ಪೂರ್ಣೇಶ್ ಮೋದಿಗೆ ಸುಪ್ರೀಂ ಸೂಚನೆ