ನವದೆಹಲಿ: ಬೋರ್ಡ್ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸುವರು. ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಪಿಪಿಸಿ 2023 ಸ್ಪರ್ಧೆಯ ವಿಜೇತರು ಪ್ರಧಾನಿಯೊಂದಿಗೆ ಸಂವಾದ ನಡೆಸುವ ಅವಕಾಶ ಪಡೆದಿದ್ದು, ವಿದ್ಯಾರ್ಥಿಗಳು ಪರೀಕ್ಷೆಯ ಒತ್ತಡವನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮವನ್ನು ಶಿಕ್ಷಣ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿ ವತಿಯಂದ ಟ್ವಿಟರ್, ಫೇಸ್‌ಬುಕ್, ಯೂಟ್ಯೂಬ್‌ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಶಿಕ್ಷಣ ಸಚಿವಾಲಯದ ಅಧಿಕೃತ ವೆಬ್‌ಸೈಟ್ education.gov.in ನಲ್ಲಿ ನೇರ ಪ್ರಸಾರ ವೀಕ್ಷಿಸಲು ಲಿಂಕ್ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೀಡಿರುವ ಮಾಹಿತಿ ಪ್ರಕಾರ, ಈ ವರ್ಷ ಸುಮಾರು 38.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಣಿಗಳು ಹೆಚ್ಚಾಗಿದೆ. ಕಳೆದ ವರ್ಷ (15.73 ಲಕ್ಷ) ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ವರ್ಷ ಇದರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಮಕ್ಕಳ ಜೊತೆ ಶಿಕ್ಷಕರು, ಪೋಷಕರು ಸಹ ಪರೀಕ್ಷಾ ಪೇ ಚರ್ಚಾಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
"ಇಲ್ಲಿಯವರೆಗೆ ಸುಮಾರು 20 ಲಕ್ಷ ಪ್ರಶ್ನೆಗಳನ್ನು ಸ್ವೀಕರಿಸಲಾಗಿದೆ. ಕೌಟುಂಬಿಕ ಒತ್ತಡ, ಒತ್ತಡ ನಿರ್ವಹಣೆ, ಅನ್ಯಾಯ ತಡೆಗಟ್ಟುವ ವಿಧಾನ, ಆರೋಗ್ಯ ಮತ್ತು ಸದೃಢವಾಗಿರುವುದು ಹೇಗೆ, ವೃತ್ತಿ ಆಯ್ಕೆ ಮುಂತಾದ ವಿವಿಧ ವಿಷಯಗಳ ಕುರಿತ ಪ್ರಶ್ನೆಗಳನ್ನು ಎನ್‌ಸಿಇಆರ್‌ಟಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ" ಎಂದು ಸಚಿವರು ತಿಳಿಸಿದರು. ಇನ್ನುಳಿದಂತೆ ಪರೀಕ್ಷಾ ಪೇ ಚರ್ಚಾದ ವಿಶೇಷತೆ ಹೀಗಿದೆ.
ಇದನ್ನೂ ಓದಿ:'ಪರೀಕ್ಷಾ ಪೇ ಚರ್ಚಾ' ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್: ಸಚಿವ ಬಿ ಸಿ ನಾಗೇಶ್
ಪರೀಕ್ಷಾ ಪೇ ಚರ್ಚಾದ ವಿಶೇಷತೆ: ಪರೀಕ್ಷೆಗೆ ಸಿದ್ಧರಾಗುವ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರಿಗೆ ಧೈರ್ಯ ತುಂಬುವ ಮತ್ತು ಯಶಸ್ವಿಯಾಗಿ ಪರೀಕ್ಷೆ ಎದುರಿಸಲು ಆತ್ಮಸ್ಥೈರ್ಯ ತುಂಬುವ ವಿಶೇಷ ಕಾರ್ಯಕ್ರಮ ಇದಾಗಿದೆ. ಈ ಕಾರ್ಯಕ್ರಮವನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ನಡೆಸಿಕೊಡುತ್ತಾರೆ. ಆನ್‌ಲೈನ್, ಪತ್ರಗಳ ಮೂಲಕ ಮಕ್ಕಳು, ಪಾಲಕರು ಕೇಳಿರುವ ಪ್ರಶ್ನೆಗಳಿಗೆ ಮೋದಿ ಉತ್ತರ ನೀಡುತ್ತಾರೆ. ಕರ್ನಾಟಕದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಲ್ಲಿ ಎಲ್‌ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಪರೀಕ್ಷಾ ಪೇ ಚರ್ಚಾ: ಮೋದಿ ಜೊತೆಗಿನ ಸಂವಾದದಲ್ಲಿ ವಿದ್ಯಾರ್ಥಿ, ಪಾಲಕರು ಭಾಗಿ