ನವದೆಹಲಿ: ಭಾರತವು ಪ್ರತಿಭೆಯ ಪ್ರಮುಖ ಕೇಂದ್ರವಾಗಿದೆ. ನಮ್ಮ ದೇಶವು ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸುತ್ತಿದೆ. ಆರ್ಥಿಕ ಬೆಳವಣಿಗೆಯ ಮೂಲವು ಸಾಂಪ್ರದಾಯಿಕ ಉದ್ಯಮಗಳು ಮತ್ತು ಸ್ಟಾರ್ಟ್ ಅಪ್‌ಗಳ ಸಂಯೋಜನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದುಬೈನಲ್ಲಿ ನಿನ್ನೆಯಿಂದ ಆರಂಭವಾಗಿರುವ ದುಬೈ ಎಕ್ಸ್‌ಪೋ-2020ರಲ್ಲಿ ಭಾರತದ ವೇದಿಕೆಯನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ದುಬೈ ಜೊತೆಗಿನ ಭಾರತದ ಸಂಬಂಧವನ್ನು ಬಲಪಡಿಸುವಲ್ಲಿ ಯುಎಇ ಪ್ರಮುಖ ಪಾತ್ರ ವಹಿಸುತ್ತದೆ. ಯುಎಇ, ದುಬೈ ಹಾಗೂ ನಮ್ಮ ಸಂಬಂಧವನ್ನು ಈ ಎಕ್ಸ್‌ಪೋ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಆಶಿಸುತ್ತೇನೆ. ಭಾರತವು ಅವಕಾಶಗಳ ವೇದಿಕೆಯಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮತ್ತು ಹೂಡಿಕೆಗೆ ಸೂಕ್ತವಾಗಿದೆ ಎಂದರು.
ಯುಎಇ ಅಧ್ಯಕ್ಷ ಅಬುಧಾಬಿಯ ಆಡಳಿತಗಾರ ಶೇಖ್ ಖಲೀಫಾ ಬಿನ್ ಜಾಯೆದ್ ಬಿನ್ ಅಲ್ ನಹ್ಯಾನ್, ಯುಎಇ ಪ್ರಧಾನಿ ಹಾಗೂ ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ಅಬುಧಾಬಿಯ ರಾಜಕುಮಾರ ಶೇಖ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು.
'ಮುಕ್ತತೆ, ಅವಕಾಶ ಮತ್ತು ಬೆಳವಣಿಗೆ' ಎಕ್ಸ್‌ಪೋದಲ್ಲಿ ಭಾರತದ ವೇದಿಕೆಯ ವಿಷವಾಗಿದೆ. ಕಳೆದ ವರ್ಷ ಕೋವಿಡ್‌ನಿಂದ ಎಕ್ಸ್‌ಪೋ ರದ್ದಾಗಿತ್ತು. ಈ ಬಾರಿ 1,080 ಎಕರೆಯ ಬೃಹತ್ ಪ್ರದೇಶದಲ್ಲಿ ನಡೆಯುತ್ತಿರುವ ಎಕ್ಸ್‌ಪೋದಲ್ಲಿ 190 ಕ್ಕೂ ಹೆಚ್ಚು ದೇಶಗಳು ಭಾಗವಹಿಸಿವೆ