ನವದೆಹಲಿ: ಇಲ್ಲಿನ ರೆಸ್ಟೋರೆಂಟ್‌ವೊಂದು ಸೆಪ್ಟೆಂಬರ್ 17 ರಂದು(ನಾಳೆ) ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಅವರಿಗೆ ಸಮರ್ಪಿತವಾದ ವಿಶೇಷ 'ಥಾಲಿ'ಯನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ.
ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ ಅರ್ಡೋರ್ 2.1 ಎಂಬ ರೆಸ್ಟೊರೆಂಟ್, 56 ಬಗೆ ಬಗೆ ತಿನಿಸುಗಳನ್ನು ಹೊಂದಿರುವ ದೊಡ್ಡ ಗಾತ್ರದ ಥಾಲಿಯನ್ನು ಗ್ರಾಹಕರಿಗೆ ನೀಡಲಿದೆ. ಇದರಲ್ಲಿ ಗ್ರಾಹಕರು ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು.
ರೆಸ್ಟೊರೆಂಟ್‌ನ ಮಾಲೀಕ ಸುಮಿತ್ ಕಲಾರ ಮಾತನಾಡಿ, "ನಾನು ಪ್ರಧಾನಿ ಮೋದಿ ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ನಮ್ಮ ರಾಷ್ಟ್ರದ ಹೆಮ್ಮೆ. ಅವರ ಜನ್ಮದಿನದಂದು ನಾವು ವಿಶಿಷ್ಟವಾದ ಉಡುಗೊರೆ ನೀಡಲು ಬಯಸುತ್ತೇವೆ. ಆದ್ದರಿಂದ 56 ಇಂಚಿನ ಈ ಥಾಲಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ" ಎಂದರು.
"ಮೋದಿ ಅವರಿಗೆ ಈ ಥಾಲಿಯನ್ನು ಉಡುಗೊರೆಯಾಗಿ ನೀಡಲು ಬಯಸುತ್ತೇವೆ. ಅವರು ಇಲ್ಲಿಗೆ ಬಂದು ಇದನ್ನು ತಿನ್ನಬೇಕೆಂಬುದು ನಮ್ಮ ಬಯಕೆ. ಆದರೆ, ಭದ್ರತಾ ಕಾರಣಗಳಿಂದ ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಇದು ಅವರನ್ನು ತುಂಬಾ ಪ್ರೀತಿಸುವ ಅವರ ಎಲ್ಲಾ ಅಭಿಮಾನಿಗಳಿಗಾಗಿ. ದಯವಿಟ್ಟು ಬಂದು ಈ ಥಾಲಿಯಲ್ಲಿರುವ ಖಾದ್ಯಗಳನ್ನು ಆನಂದಿಸಿ" ಎಂದು ಅವರು ಇದೇ ವೇಳೆ ಮನವಿ ಮಾಡಿದರು.
ಬಹುಮಾನ ಗೆಲ್ಲುವ ಅವಕಾಶ: ಈ ಥಾಲಿಯೊಂದಿಗೆ ಕೆಲವು ಬಹುಮಾನಗಳನ್ನೂ ಇಡಲು ನಿರ್ಧರಿಸಿದ್ದೇವೆ. ಸೆಪ್ಟೆಂಬರ್ 17-26 ರ ನಡುವೆ ದಂಪತಿಗಳಲ್ಲಿ ಯಾರಾದರೂ ವಿಶಿಷ್ಟ ಥಾಲಿಯನ್ನು 40 ನಿಮಿಷಗಳಲ್ಲಿ ತಿಂದು ಮುಗಿಸಿದರೆ ನಾವು ಅವರಿಗೆ 8.5 ಲಕ್ಷ ರೂ.ನೀಡುತ್ತೇವೆ. ಹಾಗೆಯೇ ಅದೃಷ್ಟಶಾಲಿ ವಿಜೇತರು ಅಥವಾ ದಂಪತಿ ಕೇದಾರನಾಥ ದೇಗುಲಕ್ಕೆ ಉಚಿತ ಪ್ರವಾಸ ಅವಕಾಶ ಪಡೆಯುತ್ತಾರೆ. ಕೇದಾರನಾಥ ಪ್ರಧಾನಿ ಮೋದಿ ಅವರ ನೆಚ್ಚಿನ ತಾಣಗಳಲ್ಲಿ ಒಂದು" ಎಂದು ಅರ್ಡೋರ್ ಮಾಲೀಕರು ಹೇಳಿದ್ದಾರೆ.
ಥಾಲಿ ಎಂದರೇನು: ಉತ್ತರ ಭಾರತ ಮತ್ತು ಆಗ್ನೇಯ ಏಷ್ಯಾದಲ್ಲಿ ಊಟವನ್ನು ಬಡಿಸಲು ಬಳಸಲಾಗುವ ತಟ್ಟೆ. ಥಾಲಿ ಪದವನ್ನು ವಿವಿಧ ಆಯ್ದ ಖಾದ್ಯಗಳನ್ನು ಹೊಂದಿರುವ ಭಾರತೀಯ ಶೈಲಿಯ ಊಟವನ್ನು ಸೂಚಿಸಲೂ ಬಳಸಲಾಗುತ್ತದೆ.
ಇದನ್ನೂ ಓದಿ: ಪ್ರಧಾನಿಗೆ ಬಂದ 1200 ಗಿಫ್ಟ್ಗಳ ಹರಾಜು: ನಮಾಮಿ ಗಂಗಾ ಯೋಜನೆಗೆ ಹೋಗಲಿದೆ ಹಣ