ಸಿಲಿಗುರಿ (ಪಶ್ಚಿಮ ಬಂಗಾಳ) ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರ ದುಷ್ಟಕೂಟದ ಬಗ್ಗೆ ಭಾರತದ ಜನತೆಗೆ ತಿಳಿದಿದೆ. ಅವರು ಬಂಗಾಳದಲ್ಲಿ ಪರಿವರ್ತನೆ ಆಗಲಿದೆ ಎನ್ನುತ್ತಿದ್ದಾರೆ. ಆದರೆ ಪರಿವರ್ತನೆ ಬಂಗಾಳದಲ್ಲಿ ಅಲ್ಲ, ದೆಹಲಿಯಲ್ಲಿ ಅಧಿಕಾರದ ಪರಿವರ್ತನೆ ಆಗಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ತಿರುಗೇಟು ನೀಡಿದ್ದಾರೆ.
ಕೆಲ ಹೊತ್ತಿಗೆ ಮುಂಚೆ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಟಿಎಂಸಿ ಸರ್ಕಾರವನ್ನು ದುಷ್ಟರ ಕೂಟ ಎಂದು ಜರಿದಿದ್ದರು. ಇದಾಗಿ ಕೆಲ ಹೊತ್ತಿನಲ್ಲೇ ಸಿಲಿಗುರಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸಿಎಂ ಮಮತಾ, ಮೋದಿ ಹಾಗೂ ಶಾ ಅವರೇ ದೊಡ್ಡ ದುಷ್ಟಕೂಟ ಎಂದಿದ್ದಾರೆ.
ರಾಜಕೀಯ ಆಟದ ಕಣ ಸಿದ್ಧವಾಗಿದ್ದು, ನಾವು ಆಟವಾಡಲು ಸನ್ನದ್ಧರಾಗಿದ್ದೇವೆ. ಒಂದು ವೇಳೆ ಅವರು ಹಣ ಕೊಟ್ಟು ನಿಮ್ಮ ಮತ ಖರೀದಿಸಲು ಯತ್ನಿಸಿದರೆ ಅವರಿಂದ ಹಣ ಪಡೆದುಕೊಳ್ಳಿ. ಆದರೆ ನಿಮ್ಮ ಮತವನ್ನು ಮಾತ್ರ ಟಿಎಂಸಿಗೇ ನೀಡಿ ಎಂದು ಸಿಎಂ ಮಮತಾ ಮತದಾರರರಿಗೆ ಕರೆ ನೀಡಿದರು.
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಪ್ರಧಾನಿ ಮೋದಿ ಆರೋಪಿಸುತ್ತಿದ್ದಾರೆ. ಆದರೆ ಅವರದೇ ಸರ್ಕಾರವಿರುವ ಉತ್ತರ ಪ್ರದೇಶ, ಬಿಹಾರ ಹಾಗೂ ಇನ್ನಿತರ ರಾಜ್ಯಗಳಲ್ಲಿ ಏನಾಗುತ್ತಿದೆ ಎಂದು ನೋಡಿ. ವಾಸ್ತವದಲ್ಲಿ ಬಂಗಾಳದಲ್ಲಿಯೇ ಮಹಿಳೆಯರು ಅತಿ ಹೆಚ್ಚು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು.