ಲಕ್ನೋ/ಘಾಜಿಯಾಬಾದ್ (ಉತ್ತರ ಪ್ರದೇಶ): ಕಳೆದ ವಾರ ಉತ್ತರ ಪ್ರದೇಶದ ಘಾಜಿಯಾಬಾದ್ನಲ್ಲಿ 19 ವರ್ಷದ ಯುವತಿಯ ಸಾವಿಗೆ ಕಾರಣವಾಗಿದ್ದ ಮೊಬೈಲ್ ದರೋಡೆ ಪ್ರಕರಣದ ಆರೋಪಿಗಳ ಪೈಕಿ ಒಬ್ಬನನ್ನು ಭಾನುವಾರ ತಡರಾತ್ರಿ ಪೊಲೀಸರು ಎನ್ಕೌಂಟರ್ ಮಾಡಿದ್ದಾರೆ. ಘಾಜಿಯಾಬಾದ್ನ ಮಿಶಾಲ್ ಗರ್ಹಿ ಎಂಬಲ್ಲಿನ ನಿವಾಸಿ, ಆರೋಪಿ ಜಿತೇಂದ್ರ ಅಲಿಯಾಸ್ ಜೀತು ಮೃತಪಟ್ಟಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇಬ್ಬರು ವ್ಯಕ್ತಿಗಳು ಬೈಕ್ನಲ್ಲಿ ಬರುತ್ತಿರುವುದನ್ನು ಕಂಡು ಚೆಕ್ಪಾಯಿಂಟ್ನಲ್ಲಿದ್ದ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ. ಪೊಲೀಸರ ಸೂಚನೆ ಲೆಕ್ಕಿಸದೇ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದು ಮಾತ್ರವಲ್ಲದೆ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಅಧಿಕಾರಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಆರೋಪಿಗೆ ಗುಂಡು ತಗುಲಿತು. ಆತನೊಂದಿಗಿದ್ದ ಇನ್ನೊಬ್ಬ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ಸೇರಿಸಿದ್ದು, ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರ ನೀಡಿದರು.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಘಾಜಿಯಾಬಾದ್ ಉಪ ಪೊಲೀಸ್ ಆಯುಕ್ತ ವಿವೇಕ್ ಚಂದ್ರ ಯಾದವ್, "ರಾತ್ರಿ ಮಸೂರಿ ಪೊಲೀಸರು ಗಂಗಾನಹರ್ ಟ್ರ್ಯಾಕ್ನಲ್ಲಿ ತಪಾಸಣೆ ನಡೆಸುತ್ತಿದ್ದರು. ರಸ್ತೆಯಲ್ಲಿ ಇಬ್ಬರು ಬೈಕ್ನಲ್ಲಿ ಬರುತ್ತಿರುವುದನ್ನು ಗಮನಿಸಿದ್ದಾರೆ. ಪೊಲೀಸರ ತಂಡ ಅವರನ್ನು ತಡೆಯಲು ಮುಂದಾದಾಗ, ಓಡಿ ಹೋಗಲು ಪ್ರಯತ್ನಿಸಿದ್ದಾರೆ. ಮಾತ್ರವಲ್ಲ, ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ. ಸಬ್ಇನ್ಸ್ಪೆಕ್ಟರ್ ಒಬ್ಬರು ಗಾಯಗೊಂಡರು. ಆತ್ಮರಕ್ಷಣೆಗಾಗಿ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದಾಗ ಒಬ್ಬ ಗಾಯಗೊಂಡು, ಇನ್ನೊಬ್ಬ ಸ್ಥಳದಿಂದ ಪರಾರಿಯಾದ. ಗಾಯಾಳು ಆರೋಪಿ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ ಈ ಹಿಂದೆ 12 ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ 6ಕ್ಕೂ ಹೆಚ್ಚು ದರೋಡೆ ಪ್ರಕರಣಗಳಿವೆ" ಎಂದು ತಿಳಿಸಿದರು.
ಅಕ್ಟೋಬರ್ 27ರಂದು ಘಾಜಿಯಾಬಾದ್ನ ಎಬಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಬಿ.ಟೆಕ್ ವಿದ್ಯಾರ್ಥಿನಿ ಕೀರ್ತಿ ಸಿಂಗ್ (19) ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ನಲ್ಲಿ ಬಂದ ಇಬ್ಬರು ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ದುಷ್ಕರ್ಮಿಗಳಿಂದ ಮೊಬೈಲ್ ಕಾಪಾಡಿಕೊಳ್ಳುವ ಪ್ರಯತ್ನದಲ್ಲಿ ಕೀರ್ತಿ ಆಟೋದಿಂದ ಕೆಳಗೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.
ಇದನ್ನೂ ಓದಿ: ಆನೇಕಲ್: ನಿವೇಶನ ವಿವಾದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿ ಹತ್ಯೆ