ಉದಯಪುರ (ರಾಜಸ್ಥಾನ): ರಾಜಸ್ಥಾನದ ಉದಯಪುರದಲ್ಲಿ ಸೆಲ್ ಫೋನ್ ಸ್ಫೋಟಗೊಂಡ ನಂತರ, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಸೋಮವಾರ ನಡೆದಿದೆ. ಇದರಿಂದ ದೊಡ್ಡ ವಿಮಾನ ಅಪಘಾತವನ್ನು ತಪ್ಪಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ''470 ನಂಬರ್ನ ಏರ್ ಇಂಡಿಯಾ ಫ್ಲೈಟ್ನಲ್ಲಿ ಪ್ರಯಾಣಿಕರೊಬ್ಬರ ಮೊಬೈಲ್ ಫೋನ್ ಸ್ಫೋಟಗೊಂಡಿತು. ನಂತರ ಪೈಲಟ್ ಸಮಯ ಪ್ರಜ್ಞೆಯಿಂದ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದರು. ಎಲ್ಲ ರೀತಿಯ ತಾಂತ್ರಿಕ ತಪಾಸಣೆಯ ನಂತರ, ವಿಮಾನ ದೆಹಲಿಗೆ ತೆರಳಿತು. ಹಾರಾಟದ ವೇಳೆಯೇ ವಿಮಾನದೊಳಗಿದ್ದ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಪ್ರಯಾಣಿಕರಲ್ಲಿ ಸಂಚಲನ ಉಂಟಾಯಿತು.
ಈ ವಿಮಾನವು ಉದಯಪುರದಿಂದ ದೆಹಲಿಗೆ ಮಧ್ಯಾಹ್ನ 1 ಗಂಟೆಗೆ ಹೊರಟಿತು. ವಿಮಾನ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಪ್ರಯಾಣಿಕರ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟಗೊಂಡಿದೆ. ವಿಮಾನದಲ್ಲಿ ಒಟ್ಟು 140 ಪ್ರಯಾಣಿಕರಿದ್ದರು. ಉದಯಪುರದ ದಬೋಕ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶದ ವೇಳೆ ಕೆಲವು ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ನಂತರ ವಿಮಾನವನ್ನು ಸರಿಯಾಗಿ ಪರಿಶೀಲಿಸಲಾಯಿತು. ಎಲ್ಲವನ್ನೂ ಪರಿಶೀಲನೆ ನಡೆಸಿದ ನಂತರವೇ ವಿಮಾನವನ್ನು ದೆಹಲಿಗೆ ತೆರಳಲು ಅನುಮತಿಸಲಾಯಿತು.
ಏಪ್ರಿಲ್ 14, 2022ರಂದು ಇದೇ ರೀತಿಯ ಘಟನೆಯೊಂದ ನಡೆದಿತ್ತು. ದಿಬ್ರುಗಢದಿಂದ ದೆಹಲಿಗೆ ಇಂಡಿಗೋ ವಿಮಾನ ಹೊರಟಿತ್ತು. ಈ ವೇಳೆಯಲ್ಲಿ ಪ್ರಯಾಣಿಕರೊಬ್ಬರ ಫೋನ್‌ಗೆ ನೋಡ ನೋಡುತ್ತಿದ್ದಂತೆ ಬೆಂಕಿ ತಗುಲಿತ್ತು. ಆ ಘಟನೆಯಲ್ಲಿಯೂ ಯಾವುದೇ ಹಾನಿ ಸಂಭವಿಸಿರಲಿಲ್ಲ. ಸಿವಿಲ್ ಏವಿಯೇಷನ್ ಡೈರೆಕ್ಟರೇಟ್ ಜನರಲ್ ಅವರು, ಬ್ಯಾಟರಿಯೊಂದಿಗಿನ "ಅಸಹಜ ಓವರ್ ಹೀಟಿಂಗ್" ಸಮಸ್ಯೆಯಿಂದಾಗಿ ಫೋನ್‌ಗೆ ಬೆಂಕಿ ತಗುಲಿತ್ತು ಎಂದು ತಿಳಿಸಿದ್ದರು. ಕ್ಯಾಬಿನ್ ಸಿಬ್ಬಂದಿ ಕೂಡಲೇ ಯಂತ್ರದ ಸಹಾಯದಿಂದ ಬೆಂಕಿ ನಂದಿಸಿದ್ದರು.
ಇತ್ತೀಚೆಗೆ ತುರ್ತು ಭೂಸ್ಪರ್ಶ ಮಾಡಿದ್ದ ವಿಮಾನ: ನೋಸ್ ಲ್ಯಾಂಡಿಂಗ್ ಗೇರ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಫ್ಲೈ ಬೈ ವೈರ್ ಪ್ರೀಮಿಯರ್ 1ಎ ವಿಮಾನವು ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ವಿಮಾನ ನಿಲ್ದಾಣದಲ್ಲಿ ಜುಲೈ 12ರಂದು ತುರ್ತು ಭೂಸ್ಪರ್ಶ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಮುಂದಿನ ಚಕ್ರದಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ, ತುರ್ತಾಗಿ ಎಚ್‌ಎಎಲ್‌ನಲ್ಲೇ ಲ್ಯಾಂಡಿಂಗ್ ಮಾಡಲಾಗಿತ್ತು.
ವಿಮಾನ ತುರ್ತು ಭೂಸ್ಪರ್ಶವಾಗುವ ದೃಶ್ಯಗಳು ಮೊಬೈಲ್ನಲ್ಲಿ ಸೆರೆ ಹಿಡಿಯಲಾಗಿತ್ತು. ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಮಗುಚಿ ಬೀಳುವ ಹಂತಕ್ಕೆ ಹೋಗಿತ್ತು. ಇಬ್ಬರು ಪೈಲಟ್‌ಗಳು ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಸಂಬಂಧ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಅಧಿಕೃತ ಹೇಳಿಕೆಯಲ್ಲಿ ಮಾಹಿತಿ ನೀಡಿತ್ತು. ''ಎ ಫ್ಲೈ ಬೈ ವೈರ್ ಪ್ರೀಮಿಯರ್-1ಎ ಏರ್‌ಕ್ರಾಫ್ಟ್ ವಿಟಿ- ಕೆಬಿಎನ್ನ ಏರ್ಟರ್ನ್ಬ್ಯಾಕ್ನಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ ಎಚ್ಎಎಲ್ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿತ್ತು. ಈ ವಿಮಾನವು ಎಚ್ಎಎಲ್ನಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿತ್ತು. ಇಬ್ಬರು ಪೈಲಟ್‌ಗಳು ಮಾತ್ರ ಇದ್ದರು ಹಾಗೂ ಯಾವುದೇ ಪ್ರಯಾಣಿಕರು ವಿಮಾನದಲ್ಲಿ ಇರಲಿಲ್ಲ'' ಎಂದು ಮಾಹಿತಿ ನೀಡಿತ್ತು.
ಇದನ್ನೂ ಓದಿ: ತಾಂತ್ರಿಕ ದೋಷ: ಬೆಂಗಳೂರಿನ HAL ಏರ್ಪೋರ್ಟ್ನಲ್ಲಿ ವಿಮಾನ ತುರ್ತು ಭೂಸ್ಪರ್ಶ