ಹೈದರಾಬಾದ್: ಶಾಸಕರ ಖರೀದಿ ಪ್ರಕರಣ ಸಂಬಂಧ ಆರೋಪಿ ನಂದ ಕುಮಾರ್ ಹೆಂಡತಿ ಚಿತ್ರಲೇಖ ಮತ್ತು ಅಂಬರ್ಪೇಟ್ ವಕೀಲ ಪ್ರತಾಪ್ ಗೌಡ್ ಅವರನ್ನು ಎಸ್‌ಐಟಿ ವಿಚಾರಣೆಗೆ ಒಳಪಡಿಸಿದೆ. ಪ್ರಕರಣ ಸಂಬಂಧ ಇವರನ್ನು ಎಸ್‌ಐಟಿ ಎಂಟು ಗಂಟೆಗಳ ಕಾಲ ತನಿಖೆ ನಡೆಸಿದ್ದು, ಕರೀಂ ನಗರ ಬುಸರಪು ಶ್ರೀನಿವಾಸ್ ಅವರಿಗೂ ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಈ ಮೊದಲು ಪ್ರತಾಪ್ ಗೌಡ್ ಶಾಸಕರಿಗೆ ಹಣದ ಆಮಿಷವೊಡ್ಡಿದ್ದರ ಬಗ್ಗೆ ತಮಗೆ ಏನೂ ತಿಳಿದಿಲ್ಲ ಎಂದು ಹೇಳಿದ್ದರು. ಹಲವು ಬಾರಿ ಪ್ರಶ್ನಿಸಿದ ಬಳಿಕ ಅಧಿಕಾರಿಗಳು ದಾಖಲೆಗಳನ್ನು ತೋರಿಸಿದಾಗ, ನಂದಕುಮಾರ್ಗೆ ಭಾರಿ ಪ್ರಮಾಣದ ಹಣವನ್ನು ಪ್ರತಾಪ್ ಗೌಡ್ ನೀಡಿರುವುದು ಬೆಳಕಿಗೆ ಬಂದಿದೆ ಎನ್ನಲಾಗ್ತಿದೆ. ಅಲ್ಲದೇ, ಈ ಪ್ರಕ್ರಿಯೆಯಲ್ಲಿ ತಾನು ಭಾಗಿಯಾಗಿರುವುದಾಗಿ ಆತ ಎಸ್‌ಐಟಿ ಮುಂದೆ ಒಪ್ಪಿಕೊಂಡಿದ್ದು, ತನ್ನ ತಪ್ಪಿಗೆ ಕಣ್ಣೀರು ಕೂಡ ಹಾಕಿದ್ದಾರೆ.
ದೊಡ್ಡ ಮೊತ್ತ ಹಣ ನೀಡಿದ್ದು, ಕೇಂದ್ರದಲ್ಲಿ ಉನ್ನತ ಸ್ಥಾನ ನೀಡುವ ಭರವಸೆ ನೀಡಿದ್ದನ್ನು ಆರೋಪಿ ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಇಬ್ಬರ ನಡುವಿನ ಸಂಭಾಷಣೆ ಕೂಡ ಪ್ರತಾಪ್ ಗೌಡ ಮೊಬೈಲ್ನಲ್ಲಿ ಸಿಕ್ಕಿದೆ ಎನ್ನಲಾಗ್ತಿದ್ದು, ಇದನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಹಣ ಸಂಗ್ರಹಿಸಿ ಹುದ್ದೆ ನೀಡುವ ಪ್ರಕರಣ ಸಂಬಂಧ ಪೊಲೀಸರು ಕೂಡ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಶನಿವಾರ ನಡೆಯುವ ವಿಚಾರಣೆಗೂ ಕೂಡ ಪ್ರತಾಪ್ ಗೌಡ್ಗೆ ಹಾಜರಾಗಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ರಾಮಚಂದ್ರ ಭಾರತಿ, ಸಿಂಹಯಾಜಿ ಮತ್ತು ಇತರೆ ಶಾಸಕರ ಜೊತೆ ಕೂಡ ನಂದಕುಮಾರ್ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಉಳಿದ ಆರೋಪಿಗಳೊಂದಿಗೆ ನಂದಕುಮಾರ್ ತಾಂಡೂರ್ ಶಾಸಕ ರೋಹಿತ್ ರೆಡ್ಡಿ ಜೊತೆಗೆ ಕೂಡ ಮಾತನಾಡಿದ್ದಾರೆ. ಈ ಸಂಬಂಧ ಕೆಲವು ಸ್ಕ್ರೀನ್ ಶಾಟ್ಗಳನ್ನು ನಂದಕುಮಾರ್ ತಮ್ಮ ಹೆಂಡತಿ ಚಿತ್ರಲೇಖ ಅವರ ಮೊಬೈಲ್ ವಾಟ್ಸಾಪ್ಗೆ ಕಳುಹಿಸಿದ್ದು, ಪೊಲೀಸರು ಈ ಕುರಿತು ಅವರನ್ನು ವಿಚಾರಣೆ ನಡೆಸಿದ್ದಾರೆ.
ತನಿಖೆ ಪ್ರಾರಂಭದಲ್ಲಿ ಈ ವಿಚಾರದ ಬಗ್ಗೆ ಚಿತ್ರಲೇಖ ತಿಳಿದಿಲ್ಲ ಎಂದು ಹೇಳಿದರು. ಬಳಿಕ ಈ ಬಗ್ಗೆ ಗಂಡ ತಮ್ಮೊಟ್ಟಿಗೆ ಮಾತನಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖಲಾದ ನಂತರ ಆರೋಪಿಗಳ ಬಂಧನವನ್ನು ನ್ಯಾಯಾಲಯ ಒಪ್ಪದ ಕಾರಣ ರಾಮಚಂದ್ರ ಭಾರತಿ ಹಾಗೂ ಸಿಂಹಯಾಜಿ ಎರಡು ದಿನ ನಂದಕುಮಾರ್ ಮನೆಯಲ್ಲಿ ತಂಗಿದ್ದರು. ಅವರನ್ನು ಯಾವ ಉದ್ದೇಶಕ್ಕಾಗಿ ಕರೆಯಲಾಯಿತು ಎಂಬ ಪ್ರಶ್ನೆಗೆ ಉತ್ತರಿಸಿರುವ ಚಿತ್ರಲೇಖ ಯಾವುದೋ ಪೂಜೆಗೆ ಇಬ್ಬರನ್ನು ಕರೆಯಲಾಯಿತು ಎಂದು ತನಿಖೆಯಲ್ಲಿ ಹೇಳಿದ್ದು, ಸೋಮವಾರ ವಿಚಾರಣೆಗೆ ಬರುವಂತೆ ಎಸ್‌ಐಟಿ ಅವರಿಗೆ ಸೂಚಿಸಿದೆ.
ಇದನ್ನೂ ಓದಿ: ಟಿಆರ್ಎಸ್ ಶಾಸಕರ ಖರೀದಿ ಆರೋಪ ಪ್ರಕರಣ: ಬಿಎಲ್ ಸಂತೋಷ್‌ಗೆ ಜಾರಿಯಾಗಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ