ಚೆನ್ನೈ (ತಮಿಳುನಾಡು): ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಅಧ್ಯಕ್ಷರಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸತತ ಎರಡನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಭಾನುವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಎಂಕೆ ಸ್ಟಾಲಿನ್ ಅವರನ್ನು ಆಯ್ಕೆ ಮಾಡಲಾಗಿದೆ.
ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ನಾಯಕ ಮತ್ತು ರಾಜ್ಯದ ಜಲಮಂಡಳಿ ಸಚಿವ ಎಸ್.ದುರೈಮುಗುವಾನ್ ಹಾಗೂ ಪಕ್ಷದ ಖಜಾಂಚಿಯಾಗಿ ಕೇಂದ್ರದ ಮಾಜಿ ಸಚಿವ ಹಾಗೂ ಸಂಸದ ಟಿಆರ್ ಬಾಲು ಸಹ ಮರು ಆಯ್ಕೆಯಾದರು. ಮತ್ತೊಬ್ಬ ನಾಯಕ ಕೆಎನ್ ನೆಹರೂ ಅವರನ್ನು ಪಕ್ಷದ ಮುಖ್ಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಸ್ಟಾಲಿನ್ ತಮ್ಮ ಕಿರಿಯ ಸಹೋದರಿ ಕನಿಮೋಳಿ ಕರುಣಾನಿಧಿ ಅವರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಿಸಿದ್ದಾರೆ. ಉಪ ಪ್ರಧಾನ ಕಾರ್ಯದರ್ಶಿಗಳಾಗಿ ಐ.ಪೆರಿಯಸಾಮಿ, ಎ.ರಾಜ, ಕೆ.ಪೊನ್ಮುಡಿ ಮತ್ತು ಅಂತಿಯೂರು ಸೆಲ್ವರಾಜ್ ಅವರನ್ನು ನೇಮಿಸಲಾಗಿದೆ.
ಲೋಕಸಭಾ ಚುನಾವಣೆಗೆ ಸಿದ್ದರಾಗಿ: ಮತ್ತೊಮ್ಮೆ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿದ್ದಂತೆ ಎಂಕೆ ಸ್ಟಾಲಿನ್ ಲೋಕಸಭಾ ಚುನಾವಣೆಗೆ ಸಿದ್ಧರಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲ 39 ಸ್ಥಾನಗಳು ಮತ್ತು ಪುದುಚೇರಿಯ 1 ಲೋಕಸಭಾ ಸ್ಥಾನವನ್ನು ಗೆಲ್ಲಲು ಶ್ರಮಿಸಬೇಕೆಂದು ಕರೆ ನೀಡಿದ್ದಾರೆ.
ಪಕ್ಷದಲ್ಲಿನ ಪರಸ್ಪರ ಕಿತ್ತಾಟದ ಬಗ್ಗೆಯೂ ಎಚ್ಚರಿಕೆ ನೀಡಿರುವ ಸ್ವಾಲಿನ್, ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿತ್ತಾಟಕ್ಕಿಂತ ದೊಡ್ಡ ವಿಶ್ವಾಸಘಾತುಕತನ ಮತ್ತೊಂದಿಲ್ಲ. ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಕೂಡಲೇ ಇತ್ಯರ್ಥಪಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮೊಧೇರಾ ದೇಶದ ಮೊದಲ ಸೌರಶಕ್ತಿ ಗ್ರಾಮ: ನನ್ನ ಜಾತಿ ಲೆಕ್ಕಿಸದೆ ಗೆಲ್ಲಿಸಿದ್ದಾರೆ ಎಂದ ಪ್ರಧಾನಿ ಮೋದಿ