ಐಝ್ವಾಲ್ (ಮಿಜೋರಾಂ): ಜನಸಂಖ್ಯೆಯಲ್ಲಿ ಚೀನಾ ಬಳಿಕ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಭಾರತ ಇದರ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ವೇಳೆ ಮಿಜೋರಾಂ ರಾಜ್ಯವು ಜನಸಂಖ್ಯೆ ಹೆಚ್ಚಿಸಲು ವಿಶೇಷ ಆಫರ್ ನೀಡುತ್ತಿದೆ. ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಇಲ್ಲಿನ ಸಚಿವರೊಬ್ಬರು ಘೋಷಿಸಿದ್ದಾರೆ.
ವಿಶ್ವ ಅಪ್ಪಂದಿರ ದಿನವಾದ ಮೊನ್ನೆ ಭಾನುವಾರದಂದು ಮಿಜೋರಾಂ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಹೀಗೆ ಘೋಷಿಸಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಟ್ಟಿದ್ದಾರೆ. ಆದರೆ ಇವರ ಈ ಹೇಳಿಕೆ ಹಿಂದೆ ಕಾರಣವೊಂದಿದೆ. ಅದೇನೆಂದರೆ, ರಾಜ್ಯದ ಮಿಜೋ ಎಂಬ ಬುಡಕಟ್ಟು ಸಮುದಾಯದಲ್ಲಿ ಬಂಜೆತನ ಪ್ರಮಾಣ ಹೆಚ್ಚುತ್ತಿದ್ದು, ಸಂತತಿ ಕಡಿಮೆಯಾಗುತ್ತಿದೆ. ಹೀಗಾಗಿ ತಮ್ಮ ಐಝ್ವಾಲ್ ಈಸ್ಟ್ -2 ವಿಧಾನಸಭಾ ಕ್ಷೇತ್ರದೊಳಗಿರುವ ಮಿಜೋ ಸಮುದಾಯದ ಜನಸಂಖ್ಯೆ ಹೆಚ್ಚಿಸಲು ಸಚಿವರು ಹೀಗೆ 1 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಚ್ಚರಿ... ಅಚ್ಚರಿ... ಚೀನೀ ದಂಪತಿಗಳು ಇನ್ಮುಂದೆ ಮೂರು ಮಕ್ಕಳನ್ನು ಹೊಂದಬಹುದು!
ಬಹುಮಾನ ವಿಜೇತರಿಗೆ ನಗದು ಜೊತೆ ಪ್ರಮಾಣಪತ್ರ ಮತ್ತು ಟ್ರೋಫಿ ಕೂಡ ಸಿಗಲಿದೆ ಎಂದು ಸಚಿವರು ಹೇಳಿದ್ದಾರೆ. ಬಹುಮಾನದ ಮೊತ್ತವನ್ನು ಸಚಿವರ ಪುತ್ರನ ಒಡೆತನದ ಸಂಸ್ಥೆಯೊಂದು ಭರಿಸಲಿದೆಯಂತೆ. ಆದರೆ ಸಚಿವರು ಕನಿಷ್ಠ ಎಷ್ಟು ಮಕ್ಕಳಿರಬೇಕೆಂಬ ಬಗ್ಗೆ ಮಾಹಿತಿ ನೀಡಿಲ್ಲ.
2011ರ ಜನಗಣತಿಯ ಪ್ರಕಾರ ಮಿಜೋರಾಂನ ಜನಸಂಖ್ಯೆ 1,091,014 ಆಗಿದ್ದು, ಅರುಣಾಚಲ ಪ್ರದೇಶದ ನಂತರ ದೇಶದ ಎರಡನೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಮಿಜೋ ಬುಡಕಟ್ಟು ಜನರ ಸಂಖ್ಯೆ ತೀರಾ ಕಡಿಮೆ ಇದ್ದು, ಇದು ಅವರ ಉಳಿವು, ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಾರಕವಾಗಿದೆ ಎಂಬುದು ಸಚಿವ ರಾಬರ್ಟ್ ರೊಮಾವಿಯಾ ಅವರ ಅಭಿಪ್ರಾಯವಾಗಿದೆ.