ಲಖನೌ(ಉತ್ತರಪ್ರದೇಶ): 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಿಷನ್ 2022ರ ಕಾರ್ಯವನ್ನು ಸಂಸದರಿಗೆ ವಿವರಿಸಿದರು. ಎಲ್ಲ ಸಂಸದರು ಸಾರ್ವಜನಿಕರ ನಡುವೆ ತೆರಳಿ ಸಂವಹನ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಬಗ್ಗೆ ತಿಳಿಸುವಂತೆ ನಿರ್ದೇಶಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಂಗ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಸೇರಿದಂತೆ ಇತರ ನಾಯಕರು ಉಪಸ್ಥಿತರಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಯುಪಿಯ ಬಿಜೆಪಿ ಸಂಸದರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಮೋದಿ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಭಾಗಿಯಾಗಿರುವ ಯುಪಿಯ ಹೊಸ ಮಂತ್ರಿಗಳಿಗೆ ಜನ ಆಶೀರ್ವಾದ ಯಾತ್ರೆಯನ್ನು ಕೈಗೊಳ್ಳಲು ಸೂಚಿಸಲಾಯಿತು. ಇನ್ನು ಸಾರ್ವಜನಿಕರ ನಡುವೆ ಹೋಗಿ ನಿಮ್ಮ ಒಳ್ಳೆಯ ಕಾರ್ಯಗಳನ್ನು ವಿವರಿಸಿ, ವಿರೋಧ ಪಕ್ಷದ ಋಣಾತ್ಮಕ ಪಾತ್ರದ ಬಗ್ಗೆ ತಿಳಿಸಿ ಎಂದು ಸೂಚಿಸಿದರು.
ಬಿಜೆಪಿ ಸಂಸದರು ಆಗಸ್ಟ್ 16 ರಿಂದ ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಭೇಟಿ ನಡೆಸಲಿದ್ದು, ಚುನಾವಣೆಗೆ ಭರ್ಜರಿ ತಯಾರಿ ನಡೆಸಲಾಗುತ್ತಿದೆ.