ನವದೆಹಲಿ: 38 ವರ್ಷಗಳ ಹಿಂದೆ ಭಾರಿ ಹಿಮಕುಸಿತದಲ್ಲಿ ನಾಪತ್ತೆಯಾಗಿದ್ದ ಉತ್ತರಾಖಂಡ್ ಮೂಲದ ಯೋಧನೋರ್ವನ ಮೃತದೇಹವನ್ನು ಭಾರತೀಯ ಸೇನೆ ಇತ್ತೀಚೆಗೆ ಪತ್ತೆ ಮಾಡಿದೆ. ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಅವರ ಮೃತದೇಹ ಇದಾಗಿದ್ದು ಹಿಮಾಲಯದ ಹಿಮನದಿಯಲ್ಲಿ ದೊರೆತಿದೆ. ಭಾರತೀಯ ಸೇನೆಯ ಉತ್ತರ ಕಮಾಂಡ್ ಸೋಮವಾರ ಈ ಮಾಹಿತಿ ಬಹಿರಂಗಪಡಿಸಿದೆ. ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಬಿಲ್ಲೆಯಲ್ಲಿದ್ದ ಸಂಖ್ಯೆ ಯೋಧನ ಗುರುತು ಕಂಡುಹಿಡಿಯಲು ಸಹಕಾರಿಯಾಗಿದೆ.
1984ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಮೇಘದೂತ್ ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಇದೇ ವರ್ಷದ ಮೇ 29ರಂದು ಭಾರಿ ಹಿಮಪಾತ ಉಂಟಾಗಿತ್ತು. ಪರಿಣಾಮ 18 ಜನ ಸೈನಿಕರು ಸಾವನ್ನಪ್ಪಿದ್ದರು. ಆಗ 14 ಸೈನಿಕರ ಶವಗಳು ಮಾತ್ರವೇ ಪತ್ತೆಯಾಗಿದ್ದವು. ಇತರ 14 ಯೋಧರು ಕಾಣೆಯಾಗಿದ್ದರು. ಇದರಲ್ಲಿ ಹಿಮಪ್ರದೇಶದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಕೂಡ ಒಬ್ಬರು.
ಮೃತದೇಹ ಪತ್ತೆಯಾಗದೇ ಇರುವುದರಿಂದ ಅವರ ಕುಟುಂಬಸ್ಥರು ಬಹಳ ನೊಂದುಕೊಂಡಿದ್ದರು. ಇಂದು ಅದೇ ಹಿಮಚ್ಛಾದಿತ ಪ್ರದೇಶದಲ್ಲಿ ಗಸ್ತಿನಲ್ಲಿದ್ದಾಗ ಈ ಯೋಧನ ಅಸ್ತಿಪಂಜರ ಕಾಣಸಿಕ್ಕಿದೆ. ಯೋಧನ ಮೃತದೇಹದಲ್ಲಿ ಸಿಕ್ಕ ಎರಡು ಲಾಕೆಟ್ನಿಂದ ಅದು ಚಂದ್ರಶೇಖರ್ ಮೃತದೇಹ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಹೀಗಾಗಿ ಮೃತದೇಹವೂ ಸಿಗಲಿಲ್ಲವಲ್ಲ ಎಂದು ಕಣ್ಣೀರು ಹಾಕುತ್ತಿದ್ದ ಕುಟುಂಬವೀಗ ತುಸು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಮೃತದೇಹ ಪತ್ತೆಯಾದ ಬಗ್ಗೆ ಯೋಧನ ಪತ್ನಿ ಶಾಂತಿ ದೇವಿ ಅವರಿಗೆ ಆ.14ರಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಾಳೆ (ಆಗಸ್ಟ್ 16) ಕುಟುಂಬಕ್ಕೆ ಪಾರ್ಥಿವ ಶರೀರದ ಅವಶೇಷಗಳು ಸಿಗುವ ನಿರೀಕ್ಷೆಯಿದೆ. ಉತ್ತರಾಖಂಡದ ಹಲ್ದ್ವಾನಿಯಲ್ಲಿ ಪತ್ನಿ ಮತ್ತು ಇಬ್ಬರು ಪುತ್ರಿಯರ ಸಮ್ಮುಖದಲ್ಲಿ ಚಂದ್ರಶೇಖರ್ ಅವರ ಅಂತಿಮ ವಿಧಿವಿಧಾನಗಳು ನೆರವೇರಲಿವೆ ಎಂದು ವರದಿಯಾಗಿದೆ.
1984ರಲ್ಲಿ ಪಾಕಿಸ್ತಾನಿಗಳು ಕಣ್ಣಿಟ್ಟಿದ್ದ 'ಪಾಯಿಂಟ್ 5965' ಭೂಪ್ರದೇಶವನ್ನು ಮರು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಆಪರೇಷನ್ ಮೇಘಧೂತ್ ಆರಂಭಿಸಿತ್ತು. ಸಿಯಾಚಿನ್ ಪ್ರದೇಶದಲ್ಲಿ 16 ಸಾವಿರದಿಂದ 22 ಸಾವಿರ ಅಡಿ ಎತ್ತರ ಮೇಲೆ ಕಾರ್ಯಾಚರಣೆ ನಡೆಸಿ ಪಾಕಿಸ್ತಾನ ಸೇನೆಯನ್ನು ಓಡಿಸಿದ್ದರು.
ಇದನ್ನೂ ಓದಿ: ಹರ್ ಘರ್ ತಿರಂಗಾ ನಿಮ್ಮ ಮನೆಯಲ್ಲಿಟ್ಟುಕೊಳ್ಳಿ ಎಂದಿದ್ದ ಫಾರುಕ್ ಅಬ್ದುಲ್ಲಾರಿಂದ ಧ್ವಜಾರೋಹಣ