ಜೌನ್‌ಪುರ(ಉತ್ತರ ಪ್ರದೇಶ): ಕಳೆದ ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳು ಕಣಕ್ಕಿಳಿಯುವ ಉದ್ದೇಶದಿಂದ ಈಗಾಗಲೇ ಭರದ ಸಿದ್ಧತೆ ಮಾಡಿಕೊಳ್ತಿದ್ದಾರೆ. ಇದೇ ಚುನಾವಣೆಗೆ ಸ್ಪರ್ಧಿಸಲು 2015ರ ಮಿಸ್ ಇಂಡಿಯಾ ರನ್ನರ್ ಅಪ್ ದೀಕ್ಷಾ ಪ್ಲಾನ್ ಹಾಕಿಕೊಂಡಿದ್ದಾರೆ.
ಮಾಡೆಲಿಂಗ್ ಲೋಕದಲ್ಲೂ ಗುರುತಿಸಿಕೊಂಡಿರುವ ದೀಕ್ಷಾ ಸಿಂಗ್, ಈ ಚುನಾವಣೆ ಎದುರಿಸಲು ತೀರ್ಮಾನಿಸಿದ್ದು, ಉತ್ತರ ಪ್ರದೇಶದ ಬಕ್ಷಾ ವಾರ್ಡ್ ನಂ. 26ರಿಂದ ಸ್ಪರ್ಧಿಸಿ ತಮ್ಮ ರಾಜಕೀಯ ಜೀವನ ಆರಂಭಿಸುವ ಇರಾದೆ ಹೊಂದಿದ್ದಾರೆ. ಈ ಕುರಿತು ಮಾತನಾಡಿರುವ ದೀಕ್ಷಾ ಸಿಂಗ್, ಮೂರನೇ ತರಗತಿಯವರೆಗೆ ಬಕ್ಷಾ ಪ್ರದೇಶದ ಚಿತ್ತೋರಿ ಗ್ರಾಮದಲ್ಲಿ ವ್ಯಾಸಂಗ ಮಾಡಿದ್ದು, ಬಳಿಕ ಮುಂಬೈ ಹಾಗೂ ಸದ್ಯ ಗೋವಾದಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಮನೆಯಲ್ಲಿ ತಾಯಿ, ಸಹೋದರಿ ಇದ್ರೇ ಮತ ಹಾಕುವ ಮೊದಲು ಯೋಚಿಸಿ.. ಟಿಎಂಸಿ ಅಭ್ಯರ್ಥಿ ಕೌಶಾನಿ ವಿಡಿಯೋ ವೈರಲ್
ಈಗಾಗಲೇ ಚುನಾವಣೆಗೆ ಸ್ಪರ್ಧಿಸುವ ಉದ್ದೇಶದಿಂದ ಫಾರ್ಮ್ ಖರೀದಿಸಿದ್ದು, ಸದ್ಯದಲ್ಲೇ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಜತೆಗೆ ತಾವು ಕಾಲೇಜ್ ದಿನಗಳಿಂದಲೂ ವಿವಿಧ ಸ್ಪರ್ಧೆಗಳಲ್ಲಿ ಭಾಗಿಯಾಗ್ತಿದ್ದು, ರಾಜಕೀಯ ಚರ್ಚೆಗಳಲ್ಲೂ ಭಾಗಿಯಾಗಿದ್ದೇನೆ ಎಂದಿದ್ದಾರೆ. ಮೇಲಿಂದ ಮೇಲೆ ಈ ಗ್ರಾಮಕ್ಕೆ ಬರುತ್ತಿದ್ದು, ಜೌನ್‌ಪುರ ಅಭಿವೃದ್ಧಿಯಿಂದ ವಂಚಿತವಾಗಿರುವುದು ಗೊತ್ತಾಗಿದೆ. ಇದೇ ಕಾರಣಕ್ಕಾಗಿ ಪಂಚಾಯತ್ ಚುನಾವಣಗೆ ಸ್ಪರ್ಧೆಗೆ ನಿರ್ಧರಿಸಿದ್ದು, ಸ್ವಲ್ಪ ಬದಲಾವಣೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದಿದ್ದಾರೆ.
ಏಪ್ರಿಲ್ 15ರಿಂದ 75 ಜಿಲ್ಲೆಗಳ ಉತ್ತರ ಪ್ರದೇಶ ಪಂಚಾಯತ್ ಚುನಾವಣೆ ನಡೆಯಲಿದೆ. ದೀಕ್ಷಾ ಸಿಂಗ್ 2015ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವೇಳೆ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದರು. ಇವರ ತಂದೆ ಜಿತೇಂದ್ರ ಸಿಂಗ್ ಗೋವಾ ಮತ್ತು ರಾಜಸ್ಥಾನದಲ್ಲಿ ವ್ಯವಹಾರ ಹೊಂದಿದ್ದಾರೆ.