ಗುವಾಹಟಿ(ಅಸ್ಸೋಂ): ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಎಷ್ಟೇ ಪ್ರಯತ್ನಪಟ್ಟರೂ ಪ್ರಕ್ಷುಬ್ಧ ವಾತಾವರಣ ತಿಳಿಯಾಗಿ ಶಾಂತಿ ನೆಲೆಸಲು ಸಾಧ್ಯವಾಗಿಲ್ಲ. ಹಿಂಸಾಚಾರದಿಂದ ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮಂಗಳವಾರ ರಾತ್ರಿ ಮತ್ತೆ ಹಿಂಸಾಚಾರ ನಡೆದಿದೆ. ತಡರಾತ್ರಿ ಚರ್ಚ್‌ನಲ್ಲಿ ಕೆಲ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಇದರಲ್ಲಿ ಓರ್ವ ಮಹಿಳೆ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಪೂರ್ವ ಇಂಫಾಲ್‌ನ ಖಮೆನ್‌ಲೋಕ್ ಪ್ರದೇಶದ ಚರ್ಚ್‌ನಲ್ಲಿ ಈ ಬರ್ಬರ ಘಟನೆ ನಡೆದಿದೆ. ಗಾಯಾಳುಗಳನ್ನು ಇಂಫಾಲದ ರಾಜ್ ಮೆಡಿಸಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುಂಡಿನ ದಾಳಿಯ ವೇಳೆ ಚರ್ಚ್‌ನಲ್ಲಿ ಸುಮಾರು 25 ಮಂದಿ ಇದ್ದರು. ಏಕಾಏಕಿ ಚರ್ಚ್‌ಗೆ ನುಗ್ಗಿದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 9 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಗುಂಡಿನ ದಾಳಿ ಹಿಂದೆ ಕುಕಿ ಸಮುದಾಯದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಮಣಿಪುರದ ಐಪಿಆರ್‌ಒ ಬಾಲಕೃಷ್ಣ ಈಟಿವಿ ಇಂಡಿಯಾಗೆ ಮಾಹಿತಿ ನೀಡಿದ್ದಾರೆ. ಒಂದು ದಿನದ ಹಿಂದಷ್ಟೇ, ಪೂರ್ವ ಇಂಫಾಲ್‌ನ ಚೌರಚಂದ್‌ಪುರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸ್ವಯಂ ಸೇವಕರೊಬ್ಬರು ಸಾವನ್ನಪ್ಪಿ, ಮತ್ತು 8 ಮಂದಿ ಗಾಯಗೊಂಡಿದ್ದರು.
ಮೀಸಲಾತಿ ವಿಚಾರವಾಗಿ ಮಣಿಪುರದಲ್ಲಿ ಕುಕಿ ಮತ್ತು ಮೈಥೇಯಿ ಸಮುದಾಯಗಳ ನಡುವೆ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಹಿಂಸಾಚಾರ ನಡೆಯುತ್ತಿದೆ. ಎರಡು ಬಣಗಳ ನಡುವಿನ ಘರ್ಷಣೆಯಲ್ಲಿ 60ಕ್ಕೂ ಹೆಚ್ಚು ಜೀವಗಳು ಬಲಿಯಾಗಿದ್ದು, ನೂರಾರು ಮನೆಗಳು ಸುಟ್ಟು ಭಸ್ಮವಾಗಿವೆ. ರಾಜ್ಯದಲ್ಲಿ ಶಾಂತಿ ನೆಲೆಸಲು ಸರ್ಕಾರ ಶಾಂತಿ ಸಮಿತಿ ರಚಿಸಿದೆ.
ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರಲ್ಲದೆ, ಸಂಸದರು ಮತ್ತು ವಿವಿಧ ರಾಜಕೀಯ ಪಕ್ಷಗಳ ಸದಸ್ಯರು, ಮಾಜಿ ಆಡಳಿತ ಅಧಿಕಾರಿಗಳು, ಶಿಕ್ಷಣ ತಜ್ಞರು, ಸಾಹಿತಿಗಳು, ಕಲಾವಿದರು, ಸಾಮಾಜಿಕ ಕಾರ್ಯಕರ್ತರು ಮತ್ತು ವಿವಿಧ ಧಾರ್ಮಿಕ ಸಂಸ್ಥೆಗಳ ಪ್ರತಿನಿಧಿಗಳು ಶಾಂತಿಗಾಗಿ ಶ್ರಮಿಸುತ್ತಿದ್ದಾರೆ. ಜೂನ್ 15 ರವರೆಗೆ ಇಡೀ ರಾಜ್ಯದಲ್ಲಿ ಇಂಟರ್‌ನೆಟ್ ಸೇವೆಯನ್ನು ನಿಷೇಧಿಸಲಾಗಿದೆ. ಆದರೂ, ರಾಜ್ಯದಲ್ಲಿ ಹಿಂಸಾಚಾರ ನಿಲ್ಲುತ್ತಿಲ್ಲ.
ಸೋಮವಾರವೂ ನಡೆದಿದ್ದ ಗುಂಡಿನ ದಾಳಿ: ಸೋಮವಾರವೂ ಗುಂಡಿನ ದಾಳಿ ನಡೆದಿತ್ತು. ಇಂಫಾಲ್‌ನ ಪೂರ್ವ ಜಿಲ್ಲೆಯ ಸಗೋಲ್ಮಾಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ನೊಂಗ್ಸುಮ್ ಗ್ರಾಮದಲ್ಲಿ ಶಂಕಿತ ಕುಕಿ ದಾಳಿಕೋರರು ಮತ್ತು ಗ್ರಾಮದ ಕೆಲ ಜನರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ, ಕನಿಷ್ಠ 9 ಜನರಿಗೆ ಗುಂಡು ತಾಕಿ ಗಾಯಗೊಂಡಿದ್ದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಆರಂಭವಾದ ಗುಂಡಿನ ಕಾಳಗ ಸಂಜೆಯವರೆಗೂ ನಡೆದಿತ್ತು. ಬಳಿಕ ತೀವ್ರ ಗಾಯಗೊಂಡಿದ್ದ ಓರ್ವ ವ್ಯಕ್ತಿ ಸಾವನ್ನಪ್ಪಿದ್ದ.
ಮೊದಲು ಶಂಕಿತ ಕುಕಿ ದಾಳಿಕೋರರು ಬೆಳಗ್ಗೆ 10 ಗಂಟೆಯ ಸುಮಾರಿಗೆ ನೋಂಗ್ಸುಮ್ ಗ್ರಾಮದ ಕಡೆಗೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು. ಇದರಿಂದ ತಕ್ಷಣವೇ ಎಚ್ಚೆತ್ತ ಎದುರಾಳಿ ಪಡೆಯ ಕೆಲವರು ಪ್ರತಿದಾಳಿ ನಡೆಸಿದ್ದರು. ಇವರಿಗೆ ಗ್ರಾಮದ ಇನ್ನಷ್ಟು ಜನರೂ ಸಾಥ್ ನೀಡಿದ್ದರು. ಹೀಗಾಗಿ ಇಡೀ ದಿನ ಗುಂಡಿನ ಚಕಮಕಿ ಕೇಳಿ ಬಂದಿತ್ತು.
ಇದನ್ನೂ ಓದಿ: Manipur violence: ಮಣಿಪುರದಲ್ಲಿ ಮತ್ತೆ ಹಿಂಸಾಚಾರ, ಶಂಕಿತ ಕುಕಿ ಗುಂಡಿನ ದಾಳಿಯಿಂದ 9 ಮಂದಿಗೆ ಗಾಯ