ಚಿತ್ತೂರು (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿನಿಯೊಬ್ಬಳು ತನ್ನ ಮಗಳಿಗಿಂತ ಶಿಕ್ಷಣದಲ್ಲಿ ಮುಂದಿದ್ದಾಳೆ ಎಂಬ ಕಾರಣಕ್ಕಾಗಿ ರಾಜಕಾರಣಿಯೊಬ್ಬ ಶಿಕ್ಷಕರ ಮೇಲೆ ಒತ್ತಡ ಹೇರಿ ಆ ಶಾಲೆಯಿಂದ ವಿದ್ಯಾರ್ಥಿನಿಯನ್ನು ಹೊರ ಹಾಕಿಸಿದ್ದ ಎನ್ನಲಾಗ್ತಿದೆ. ಇದರಿಂದ ಬೇಸರಗೊಂಡ ಆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಮನಕಲಕುವ ಘಟನೆ ಚಿತ್ತೂರಿನ ಪಲಮನೇರ್ನಲ್ಲಿ ಬೆಳಕಿಗೆ ಬಂದಿದೆ.
ಪಲಮನೇರ್ ಪ್ರದೇಶದ ಗಂಗಾವರಂನಲ್ಲಿರುವ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ರಾಜಕಾರಣಿಯೊಬ್ಬರ ಒತ್ತಡಕ್ಕೆ ಮಣಿದು ಶೈಕ್ಷಣಿಕ ವರ್ಷ ಮುಗಿಯುವ ಮುನ್ನವೇ ಟಿಸಿ ನೀಡಿದ್ದರೆನ್ನಲಾದ ಶಾಲೆಯ ಪ್ರಾಂಶುಪಾಲರು ತಮ್ಮ ಮಗಳಿಗೆ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ಆಕೆಯ ಕುಟುಂಬದವರು ಆರೋಪಿಸಿದ್ದಾರೆ.
ಮೃತ ವಿದ್ಯಾರ್ಥಿನಿಯ ತಂದೆ ನಜೀರ್ ಅಹಮದ್ ಸೋಡಾ ಗಾಡಿ ನಡೆಸಿ ಮಗಳನ್ನು ಕಷ್ಟಪಟ್ಟು ಖಾಸಗಿ ಶಾಲೆಗೆ ಸೇರಿಸಿದ್ದರು. ಮಿಸ್ಬಾ ಫಾತಿಮಾ ಕೂಡ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದಳು. ಅದೇ ಶಾಲೆಯಲ್ಲಿ ಓದುತ್ತಿದ್ದ ಪ್ರಭಾವಿ ರಾಜಕಾರಣಿಯೊಬ್ಬರ ಮಗಳು ಓದಿನಲ್ಲಿ ಹಿಂದೆ ಇದ್ದ ಕಾರಣ ಫಾತಿಮಾಳಿಗೆ ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮೂರು ದಿನಗಳ ಹಿಂದೆ ಶಾಲೆಯಿಂದ ಹೊರಹಾಕಿ ಟಿಸಿ ನೀಡಿದ್ದರು ಎಂಬ ಆರೋಪ ಕೇಳಿಬಂದಿದೆ.
ಡೆತ್ ನೋಟ್ನಿಂದ ವಿಷಯ ಬಹಿರಂಗ: ಮಿಸ್ಬಾ ಫಾತಿಮಾ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಾಳೆ. ಇದರಲ್ಲಿ ತಾನು ಅತ್ಯುತ್ತಮ ವಿದ್ಯಾರ್ಥಿಯಾಗಿರುವುದೇ ತನಗೆ ಮುಳ್ಳಾಯಿತು. ವೈಸಿಪಿ ಮುಖಂಡನ ಮಗಳು ಓದಿನಲ್ಲಿ ನನಗಿಂತ ಹಿಂದೆ ಇದ್ದಳು. ಇದನ್ನು ಸಹಿಸದ ಅವರು ನನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ ಎನ್ನಲಾಗ್ತಿದೆ.
ಅಲ್ಲದೇ, ನಾನು ಶಾಲೆಯಲ್ಲಿ ಅಗ್ರಸ್ಥಾನದಲ್ಲಿರಲು ಅವರು ನನ್ನನ್ನು ಶಾಲೆಯಿಂದ ಹೊರಹಾಕಲು ಶಿಕ್ಷಕರಿಗೆ ಒತ್ತಡ ಹೇರಿದ್ದರು. ಇದರಿಂದಾಗಿ ಶಿಕ್ಷಕರು ನನ್ನನ್ನು ಓದಿನಲ್ಲಿ ನೀನು ಉತ್ತಮವಾಗಿಲ್ಲ ಎಂದು ಆರೋಪಿಸಿ ಶಾಲೆಯಿಂದ ಹೊರಹಾಕಿ ಟಿಸಿ ನೀಡಿದ್ದಾರೆ. ಇದು ನನ್ನ ಮನಸ್ಸಿಗೆ ಘಾಸಿಯನ್ನುಂಟು ಮಾಡಿದ್ದು, ಇದರಿಂದಾಗಿ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಬೇರೆ ಶಾಲೆಗೆ ಸೇರಿದ್ದ ಫಾತಿಮಾ: ಶಿಕ್ಷಕರು ಫಾತಿಮಾಳ ತಂದೆಗೆ ಕರೆ ಮಾಡಿ ನಿಮ್ಮ ಮಗಳು ಸರಿಯಾಗಿ ಓದುತ್ತಿಲ್ಲ, ಹಾಗಾಗಿ ಟಿಸಿ ನೀಡುತ್ತಿದ್ದೇವೆ ಎಂದು ಹೇಳಿದ್ದರು ಎನ್ನಲಾಗ್ತಿದೆ. ಇದನ್ನು ಫಾತಿಮಾಳ ತಂದೆ ನಿರಾಕರಿಸಿದ್ದರು. ಬಳಿಕ ಫಾತಿಮಾ ಮತ್ತೊಂದು ಶಾಲೆಗೆ ಸೇರಿದ್ದಳು. ಆದರೆ, ಘಟನೆಯಿಂದ ಖಿನ್ನತೆಗೊಳಗಾಗಿದ್ದ ಫಾತಿಮಾ ಶಿಕ್ಷಣದಲ್ಲಿ ಉತ್ಸಾಹ ತೋರಿಸಲಿಲ್ಲ. ಮೂರು ದಿನಗಳ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಗಳ ಸಾವಿನಿಂದ ರೊಚ್ಚಿಗೆದ್ದ ಕುಟುಂಬಸ್ಥರು ಪಲಮನೇರ್ ಡಿಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಶಾಲೆಯ ಪ್ರಾಂಶುಪಾಲರು ಮತ್ತು ಆ ರಾಜಕಾರಣಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಲಭ್ಯವಾದ ಮಾಹಿತಿ ಪ್ರಕಾರ, ಟಿಸಿ ನೀಡಿದ್ದ ಶಿಕ್ಷಕನನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಇಬ್ಬರಿಗೂ ಒಬ್ಬನೇ ಗಂಡ ಬೇಕಂತೆ! ಹೀಗೊಂದು ಆಫರ್ ನೀಡಿದ ಇಬ್ಬರು ಗೆಳತಿಯರು