ಚಿತ್ತೂರು (ಆಂಧ್ರಪ್ರದೇಶ): ಜಿಲ್ಲೆಯ ಪಲಮನೇರ್‌ನಲ್ಲಿರುವ ಶಾಲೆಯಲ್ಲಿ ಓದುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿ ಮಿಸ್ಬಾ ಫಾತಿಮಾ ಆತ್ಮಹತ್ಯೆಗೆ ಸಂಬಂಧಿಸಿದಂತೆ ಬ್ರಹ್ಮರ್ಷಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಮೇಶ್ ಎಂಬುವರನ್ನು ಬಂಧಿಸಲಾಗಿದೆ. ಮಿಸ್ಬಾ ಸಾವಿಗೀಡಾಗಿ ನಾಲ್ಕು ದಿನಗಳ ನಂತರ, ಸಾವಿಗೆ ಕಾರಣ ಎಂದು ಶಂಕಿಸಲಾದ ಶಾಲಾ ಮುಖ್ಯ ಶಿಕ್ಷಕ ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಜಿಲ್ಲಾ ಎಸ್ಪಿ ಸೆಂಥಿಲ್ ಮಾಹಿತಿ ನೀಡಿದ್ದಾರೆ.
ಬ್ರಹ್ಮರ್ಷಿ ಶಾಲೆಯ ಮುಖ್ಯಶಿಕ್ಷಕ ಮಿಸ್ಬಾಗೆ ಶುಲ್ಕದ ಸಂಬಂಧ ಕಿರುಕುಳ ನೀಡುತ್ತಿದ್ದರಂತೆ. ಮಿಸ್ಬಾ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ರಮೇಶ್‌ಗಾಗಿ ಶೋಧ ಕಾರ್ಯ ನಡೆಸಿದ್ದರು. ಈತ ಘಟನೆಯ ನಂತರ ತಪ್ಪಿಸಿಕೊಂಡು ತಮಿಳುನಾಡಿನ ರಾಮೇಶ್ವರಂನಲ್ಲಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ನಿನ್ನೆ ಆತನನ್ನು ವಶಕ್ಕೆ ಪಡೆದಿದ್ದಾರೆ. ನಂತರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಟ್ರಾನ್ಸಿಟ್ ವಾರಂಟ್ ಮೇಲೆ ಪಲಮನೇರಿಗೆ ಕರೆತರಲಾಗಿದೆ. ಈ ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಓದಿನಲ್ಲಿ ರಾಜಕಾರಣಿ ಮಗಳಿಗಿಂತ ಬುದ್ಧಿವಂತೆ.. ವಿದ್ಯಾರ್ಥಿನಿಯ ಆತ್ಮಹತ್ಯೆಗೆ ಕಾರಣವಾಯ್ತೇ ರಾಜಕೀಯ!?
ಡೆತ್ ನೋಟ್ನಿಂದ ವಿಷಯ ಬಹಿರಂಗ: ಮಿಸ್ಬಾ ಫಾತಿಮಾ ಆತ್ಮಹತ್ಯೆಗೂ ಮುನ್ನ ಡೆತ್ನೋಟ್ ಬರೆದಿಟ್ಟಿದ್ದಳು. ಇದರಲ್ಲಿ ತಾನು ಅತ್ಯುತ್ತಮ ವಿದ್ಯಾರ್ಥಿಯಾಗಿರುವುದೇ ತನಗೆ ಮುಳ್ಳಾಯಿತು. ವೈಸಿಪಿ ಮುಖಂಡನ ಮಗಳು ಓದಿನಲ್ಲಿ ನನಗಿಂತ ಹಿಂದೆ ಇದ್ದಳು. ಇದನ್ನು ಸಹಿಸದ ಅವರು ನನಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರು ಎಂದು ಬರೆದುಕೊಂಡಿದ್ದಾಳೆ ಎನ್ನಲಾಗ್ತಿದೆ. ಅಲ್ಲದೇ, ನಾನು ಶಾಲೆಯಲ್ಲಿ ಅಗ್ರಸ್ಥಾನದಲ್ಲಿರಲು ಅವರು ನನ್ನನ್ನು ಶಾಲೆಯಿಂದ ಹೊರಹಾಕಲು ಶಿಕ್ಷಕರಿಗೆ ಒತ್ತಡ ಹೇರಿದ್ದರು. ಇದರಿಂದಾಗಿ ಶಿಕ್ಷಕರು ನನ್ನನ್ನು ಓದಿನಲ್ಲಿ ನೀನು ಉತ್ತಮವಾಗಿಲ್ಲ ಎಂದು ಆರೋಪಿಸಿ ಶಾಲೆಯಿಂದ ಹೊರಹಾಕಿ ಟಿಸಿ ನೀಡಿದ್ದಾರೆ. ಇದು ನನ್ನ ಮನಸ್ಸಿಗೆ ಘಾಸಿಯನ್ನುಂಟು ಮಾಡಿದ್ದು, ಇದರಿಂದಾಗಿ ನನ್ನ ಜೀವನವನ್ನು ಕೊನೆಗೊಳಿಸುತ್ತಿದ್ದೇನೆ ಎಂದು ವಿದ್ಯಾರ್ಥಿನಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.