ಲಖನೌ: ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರದಲ್ಲಿ ಅಪ್ರಾಪ್ತ ವಯಸ್ಕರೇ ಹೆಚ್ಚು ಭಾಗಿಯಾಗಿದ್ದಾರೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಯುಪಿ ಎಡಿಜಿ(ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಕಾನ್ಪುರ, ಪ್ರಯಾಗ್‌ರಾಜ್, ಸಹರಾನ್‌ಪುರ ಮತ್ತು ಮೊರಾದಾಬಾದ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಅಪ್ರಾಪ್ತರು ಹೆಚ್ಚು ಭಾಗಿಯಾಗಿದ್ದಾರೆ. ಈ ಅಪ್ರಾಪ್ತರು ಹಿಂದೆ ನಡೆದ ಘಟನೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮೊರಾದಾಬಾದ್ ಎಸ್ಪಿ ಹೇಮಂತ್ ಕುಟಿಯಾಲ್ ಮಾತನಾಡಿ, ಈಗಾಗಲೇ 50 ಅಪರಿಚಿತ ಅಪ್ರಾಪ್ತರ ವಿರುದ್ಧ ಬಾಲಾಪರಾಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರ ಮೇಲೆ ತೂರಾಟ ನಡೆಸಿದ ಆರೋಪಿಗಳನ್ನು ಗುರುತಿಸುತ್ತಿದ್ದೇವೆ. ಇವರೆಲ್ಲ ಸ್ಥಳೀಯರೇ ಹಾಗು ಇವರಿಗೆ ಬೇರೆ ಯಾರೋ ಆಮಿಷ ಒಡ್ಡಿದ್ದಾರೆಯೇ ಎಂಬ ಕುರಿತು ತನಿಖೆ ಮಾಡಲಾಗುತ್ತದೆ ಎಂದರು.
ಸಹರಾನ್‌ಪುರದಲ್ಲಿ 100ಕ್ಕೂ ಹೆಚ್ಚು ಅಪ್ರಪ್ತರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದು ಪ್ರಕರಣ ದಾಖಲಾಗಿದೆ. ಪ್ರಯಾಗರಾಜ್‌ನ ಅತಾಲಾ ಪ್ರದೇಶದಲ್ಲಿ ಸಹ ಪ್ರತಿಭಟನಾಕಾರರು ಪೊಲೀಸರ ಮೇಲೆ ಈ ಕಲ್ಲು ತೂರಾಟ ನಡೆಸಿದ್ದರು. ಬಳಿಕ ಆರ್‌ಎಎಫ್ ಮತ್ತು ಪಿಎಸಿ ಲಾಠಿ ಚಾರ್ಜ್ ಮಾಡಿ ಉದ್ರಿಕ್ತರನ್ನು ಚದುರಿಸಿದ್ದರು.
ಉತ್ತರ ಪ್ರದೇಶ ಮಾತ್ರವಲ್ಲದೇ, ವಿವಿಧ ರಾಜ್ಯಗಳಲ್ಲಿ ಹಿಂಸಾತ್ಮಕ ಘರ್ಷಣೆಗಳು ಮತ್ತು ಪ್ರತಿಭಟನೆಗಳ ಸುದ್ದಿಗಳು ಹೊರಬರುತ್ತಿವೆ. ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಇಬ್ಬರನ್ನು ಬಂಧಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಇದನ್ನೂ ಓದಿ: ನೂಪುರ್ ಶರ್ಮಾ ಹೇಳಿಕೆ: ಹೌರಾದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ, ಪೊಲೀಸರ ಮೇಲೆ ಕಲ್ಲು ತೂರಾಟ!