ನವದೆಹಲಿ : ಗ್ರಾಮೀಣ ಪ್ರದೇಶಗಳಲ್ಲಿ ಕೋವಿಡ್ ವಿರುದ್ಧ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು ಮತ್ತು ದೇಶದಲ್ಲಿ ಲಸಿಕೆ ಅಭಿಯಾನದ ಬಗ್ಗೆ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಹರಡುತ್ತಿರುವ ವದಂತಿಗಳಿಗೆ ತೆರೆ ಎಳೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಜೂನ್ 21ರಿಂದ ಅಭಿಯಾನ ಆರಂಭಿಸಲಿದೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
"ಜಾನ್ ಹೈ ಟು ಜಹಾನ್ ಹೈ" ಕಾರ್ಯಕ್ರಮದ ಅಂಗವಾಗಿ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು, ವಿವಿಧ ಸಾಮಾಜಿಕ-ಶಿಕ್ಷಣ ಸಂಸ್ಥೆಗಳು, ಎನ್‌ಜಿಒಗಳು ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳೊಂದಿಗೆ ಜೂನ್ 21 ರಂದು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತ ಪ್ರಾಬಲ್ಯವಿರುವ ಉತ್ತರಪ್ರದೇಶದ ರಾಂಪುರ ಜಿಲ್ಲೆಯಿಂದ ರಾಷ್ಟ್ರವ್ಯಾಪಿ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲಾಗುವುದು. ದೇಶದ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಕ್ಸಿನೇಷನ್ ಬಗ್ಗೆ ಜಾಗೃತಿ ಮೂಡಿಸಲು, ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಹರಡುತ್ತಿರುವ ವದಂತಿಗಳನ್ನು ಹತ್ತಿಕ್ಕಲು ಈ ಅಭಿಯಾನ ಆರಂಭಿಸಲಾಗುವುದು ಎಂದು ನಖ್ವಿ ಹೇಳಿದರು.
ವಿವಿಧ ಧಾರ್ಮಿಕ ಮುಖಂಡರು, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ವೈದ್ಯಕೀಯ, ವಿಜ್ಞಾನ ಮತ್ತು ಇತರ ಕ್ಷೇತ್ರಗಳ ಪ್ರಮುಖ ಜನರು ಲಸಿಕೆ ಪಡೆಯಲು ಜನರಿಗೆ ಕರೆ ನೀಡುತ್ತಿದ್ದಾರೆ. ಇನ್ಮುಂದೆ ಅಭಿಯಾನದ ಭಾಗವಾಗಿ ದೇಶಾದ್ಯಂತ ಬೀದಿ ನಾಟಕಗಳನ್ನು ಸಹ ಆಯೋಜಿಸಲಾಗುವುದು ಎಂದರು.
ಭಾರತದಲ್ಲಿ ತಯಾರಿಸಿದ ಎರಡು ಲಸಿಕೆಗಳು ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದ ಫಲವಾಗಿದ್ದು, ಸಂಪೂರ್ಣವಾಗಿ ಸುರಕ್ಷಿತವಾಗಿವೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ವ್ಯಾಕ್ಸಿನ್ ಪರಿಣಾಮಕಾರಿ ಅಸ್ತ್ರವಾಗಿದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಇದನ್ನೂ ಓದಿ:ಯೋಗದಿನದಂದು ವ್ಯಾಕ್ಸಿನೇಷನ್ ಮೇಳ : ಸಚಿವ ಸುಧಾಕರ್
ಅಲ್ಪಸಂಖ್ಯಾತ ವ್ಯವಹಾರಗಳ 'ನಾಯ್ ರೋಶ್ನಿ' ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ರಾಜ್ಯ ಹಜ್ ಸಮಿತಿಗಳು, ವಕ್ಫ್ ಮಂಡಳಿಗಳು, ಅವುಗಳ ಸಂಬಂಧಿತ ಸಂಸ್ಥೆಗಳು, ಕೇಂದ್ರ ವಕ್ಫ್ ಕೌನ್ಸಿಲ್, ಮೌಲಾನಾ ಆಜಾದ್ ಶಿಕ್ಷಣ ಪ್ರತಿಷ್ಠಾನ, ವಿವಿಧ ಸಾಮಾಜಿಕ ಮತ್ತು ಶಿಕ್ಷಣ ಸಂಸ್ಥೆಗಳು, ಎನ್‌ಜಿಒಗಳು, ಮಹಿಳಾ ಸ್ವ-ಸಹಾಯ ಗುಂಪುಗಳು ಜಾಗೃತಿ ಅಭಿಯಾನದ ಭಾಗವಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.