ಪೂಂಚ್ (ಜಮ್ಮು ಕಾಶ್ಮೀರ): ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಅಲಿ ಹೈದರ್ ಎಂಬ 14 ವರ್ಷದ ಬಾಲಕ ಗಡಿ ದಾಟಿ ಭಾರತದ ಕಡೆಗೆ ಬಂದಿದ್ದು, ಆತನನ್ನು ವಾಪಸ್ ಕಳುಹಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೂಂಚ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಮೇಶ್ ಅಂಗ್ರಲ್ ಮಾತನಾಡಿ, ಪೂಂಚ್ ಜಿಲ್ಲೆಯ ಜಮ್ಮು ಮತ್ತು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆಯ ಗುಂಪು (ಎಸ್‌ಒಜಿ) ಬಾಲಕನನ್ನು ಗುರುವಾರ ರಾತ್ರಿ ಅಜೋಟೆ ಗ್ರಾಮದ ಬತಾರ್ ನಲ್ಲಾ ಬಳಿ ಬಂಧಿಸಿದೆ. ವಿಚಾರಣೆ ವೇಳೆ ಆತ ತನ್ನ ಹೆಸರನ್ನು ಅಲಿ ಹೈದರ್ ಎಂದು ಹೇಳಿದ್ದು, ಅವನು ಪಿಒಕೆಯ ಮಿರ್ಪುರದ ನಿವಾಸಿ" ಎಂದು ಹೇಳಿದ್ದಾರೆ.
"ಆತ ಆಕಸ್ಮಿಕವಾಗಿ ಭಾರತದ ಬದಿಗೆ ಬಂದಿದ್ದಾನೆಂದು ತೋರುತ್ತದೆ. ಅವನು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲದಿದ್ದರೆ ನಾವು ಆತನನ್ನು ವಾಪಸ್ ಕಳುಹಿಸಲು ಪಾಕಿಸ್ತಾನದ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ" ಎಂದು ಆಂಗ್ರಾಲ್ ತಿಳಿಸಿದರು.
ಜಮ್ಮು ಕಾಶ್ಮೀರ ಪೊಲೀಸರು ಹಾಗೂ ಭಾರತೀಯ ಸೇನಾ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ ಹೈದರ್, "ನಾನು ಹಾದಿ ತಪ್ಪಿ ಇಲ್ಲಿಗೆ ಬಂದಿದ್ದೇನೆ. ಅವರು ನನಗೆ ಬಟ್ಟೆ, ಬೂಟುಗಳು ಮತ್ತು ಆಹಾರವನ್ನು ಒದಗಿಸಿದರು. ಪೊಲೀಸರು ಮತ್ತು ಸೇನಾ ಸಿಬ್ಬಂದಿ ಒಳ್ಳೆಯವರು. ನನ್ನನ್ನು ಮತ್ತೆ ನನ್ನ ಮನೆಗೆ ಕಳುಹಿಸುವಂತೆ ಸೇನಾ ಸಿಬ್ಬಂದಿಯನ್ನು ವಿನಂತಿಸುತ್ತೇನೆ" ಎಂದು ಹೇಳಿದ್ದಾನೆ ಈ ಬಾಲಕ.