ಬನ್ಸ್ವಾರಾ: ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಆಸ್ಪತ್ರೆಯೊಂದರಲ್ಲಿ 12 ವರ್ಷದ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ನಡೆದಿದೆ.
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 9ನೇ ತರಗತಿ ವಿದ್ಯಾರ್ಥಿನಿಯನ್ನು ಶನಿವಾರ ರಾತ್ರಿ ಜಿಲ್ಲೆಯ ಮಹಾತ್ಮ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ದಿಲೀಪ್ ರೊಕ್ಡಿಯಾ ಮಾತನಾಡಿ, ಘಟನೆಗೆ ಸಂಬಂಧಿಸಿದಂತೆ ಬನ್ಸ್ವಾರಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ. ಹುಡುಗಿಯನ್ನು ಆಸ್ಪತ್ರೆಗೆ ಕರೆತಂದ ನಂತರ, ಅವಳು 33 ವಾರಗಳ ಗರ್ಭಿಣಿಯಾಗಿರುವುದು ಗೊತ್ತಾಗಿದೆ. ಈ ಬಗ್ಗೆ ನಾವು ಅವಳೊಂದಿಗೆ ಮಾತನಾಡಿದ್ದೇವೆ. ಆಕೆಯು ವ್ಯಕ್ತಿಯೋರ್ವನ ಹೆಸರನ್ನು ಬಹಿರಂಗಪಡಿಸಿದ್ದಾಳೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ನಡುವೆ ಅಪ್ರಾಪ್ತೆಯ ಕುಟುಂಬವು ನವಜಾತ ಶಿಶುವನ್ನು ತೆಗೆದುಕೊಳ್ಳಲು ನಿರಾಕರಿಸಿದೆ. ಹೀಗಾಗಿ ಶಿಶುವು ಸದ್ಯ ಮಕ್ಕಳ ಕಲ್ಯಾಣ ಸಮಿತಿಯ ಮೇಲ್ವಿಚಾರಣೆಯಲ್ಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಮೀನಾ ತಿಳಿಸಿದ್ದಾರೆ.
ಘಟನೆ ಬಗ್ಗೆ ದಾಖಲಾದ ದೂರಿನಂತೆ ತನಿಖೆಗೆ ಪೊಲೀಸ್ ತಂಡವನ್ನು ರಚಿಸಲಾಗಿದೆ. ತಜ್ಞರು ಮತ್ತು ಮಹಿಳಾ ಪೊಲೀಸ್ ಸಿಬ್ಬಂದಿಯಿಂದ ಬಾಲಕಿಯನ್ನು ವಿಚಾರಣೆ ನಡೆಸಲಾಗುವುದು. ಅಗತ್ಯವಿದ್ದಲ್ಲಿ, ಸಿಡಬ್ಲ್ಯೂಸಿ ಕೌನ್ಸೆಲಿಂಗ್ ಕೂಡ ಮಾಡಲಾಗುವುದು ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರೀತಿಸಿದ ರೌಡಿಗೋಸ್ಕರ ಕಾಲುವೆ ಹಾರಿ ಹೋದ ಬಾಲಕಿ: ಹುಡುಕಾಟಕ್ಕಿಳಿದ ಪೊಲೀಸರಿಗೆ ಸುಸ್ತು