ಧೋಲ್ಪುರ್(ರಾಜಸ್ಥಾನ): ಕಷ್ಟ ಎಂದು ಹೇಳಿ ಹೋದ ಅಪ್ರಾಪ್ತೆಯನ್ನು ಮಾವ, ಆತನ ಸಹೋದರ ಮತ್ತು ಮಗ ದುರ್ಬಳಕೆ ಮಾಡಿಕೊಂಡು ನಿರಂತರ ಅತ್ಯಾಚಾರ ನಡೆಸಿ, ಬಳಿಕ ಆಕೆಯನ್ನು ವೇಶ್ಯಾವಾಟಿಕೆ ಗೃಹಕ್ಕೆ ತಳ್ಳಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ಬೆಳಕಿಗೆ ಬಂದಿದೆ. ಮಾವನ ಕುಟುಂಬದ ವಿರುದ್ಧ ಅಪ್ರಾಪ್ತೆ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.
2020 ರಲ್ಲಿ ತಂದೆ ಪ್ರಕರಣವೊಂದರಲ್ಲಿ ಜೈಲುಪಾಲಾಗಿದ್ದ. ಇದರಿಂದ 16 ವರ್ಷದ ಬಾಲಕಿ ಅನಾಥೆಯಾದಳು. ಅಕ್ಕ ಆಕೆಯನ್ನು ತನ್ನ ಮನೆಗೆ ಕರೆದೊಯ್ದಿದ್ದಾಳೆ. ಇದನ್ನೇ ಬಳಸಿಕೊಂಡ ದುರುಳ ಮಾವ ಬಾಲಕಿ ಮೇಲೆ ಕಣ್ಣು ಹಾಕಿದ್ದಾನೆ. ಮೊದಮೊದಲು ಉತ್ತಮವಾಗಿದ್ದ ಮಾವ ಬಳಿಕ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಮಲು ಬರುವಂತೆ ಮಾಡಿ ಅತ್ಯಾಚಾರ ನಡೆಸಿದ್ದಾನೆ. ಇಷ್ಟಲ್ಲದೇ, ಮಾವನ ಸಹೋದರನೂ ಕೂಡ ಬಾಲಕಿ ಜೊತೆಗೆ ಅನುಚಿತವಾಗಿ ನಡೆದುಕೊಂಡಿದ್ದಾನೆ.
ಚಿಕ್ಕಮ್ಮನ ಮೇಲೆ ಕಣ್ಣಾಕಿದ ಕೀಚಕ: ಮಾವ, ಆತನ ಸಹೋದರನಲ್ಲದೇ ಮಗನ ಸಮಾನನಾದ ಮಾವನ ಪುತ್ರನಿಂದಲೂ ಅಪ್ರಾಪ್ತೆ ಕಿರುಕುಳಕ್ಕೆ ಒಳಗಾಗಿದ್ದಾಳೆ. ತಾಯಿಯ ಸಹೋದರಿಗೆ ಚಿಕ್ಕಮ್ಮ ಎಂದು ಕರೆಯಬೇಕಿದ್ದ ಮಗ ಆಕೆಯ ಮೇಲೆಯೇ ದೌರ್ಜನ್ಯ ಎಸಗಿದ್ದಾನೆ. ಈ ಹೇಯ ಕೃತ್ಯ ಅಕ್ಕನಿಗೆ ಗೊತ್ತಿದ್ದರೂ ಆಕೆ ಮೌನ ವಹಿಸಿದ್ದಳು. ಅಪ್ರಾಪ್ತೆಯನ್ನು ಕೋಲ್ಕತ್ತಾಕ್ಕೆ ಕರೆದೊಯ್ದು ಮಾವ, ಆತನ ಸಹೋದರ, ಪುತ್ರ ಮತ್ತು ಆತನ ಸ್ನೇಹಿತರು ನಿರಂತರವಾಗಿ ಅತ್ಯಾಚಾರ ನಡೆಸಿದ್ದಾರೆ.
ಇದನ್ನು ಪ್ರತಿಭಟಿಸಿದ್ದಕ್ಕೆ ಬಾಲಕಿಯ ಮೇಲೆ ಹಲ್ಲೆ ಮಾಡಿ, ಬೆದರಿಕೆ ಹಾಕಲಾಗಿದೆ. ಕೀಚಕ ಸೋದರ ಮಾವ ಆಕೆಯನ್ನು ವೇಶ್ಯಾವಾಟಿಕೆ ಗೃಹದಲ್ಲಿ ಬಿಟ್ಟು ಬಂದಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜೈಲಿಂದ ಬಂದ ತಂದೆಗೆ ಕಣ್ಣೀರ ಕಥೆ ಹೇಳಿದ ಮಗಳು: ಈ ಮಧ್ಯೆ ಜೈಲು ಪಾಲಾಗಿದ್ದ ತಂದೆ ಬಿಡುಗಡೆಯಾಗಿದ್ದ. ಈ ವೇಳೆ, ತನ್ನ ಮಗಳ ಬಗ್ಗೆ ವಿಚಾರಿಸಿದಾಗ ಹಿರಿಯ ಮಗಳು ಇದರಿಂದ ನುಣುಚಿಕೊಂಡಿದ್ದಾಳೆ. ತನ್ನ ತಂದೆ ಜೈಲಿನಿಂದ ಹೊರ ಬಂದಿದ್ದು ತಿಳಿದ ಸಂತ್ರಸ್ತೆ ತನ್ನ ಹುಟ್ಟೂರಿಗೆ ಬಂದು ತಂದೆಗೆ ನಡೆದ ಘಟನೆ ಬಗ್ಗೆ ತಿಳಿಸಿದ್ದಾಳೆ. ಬಳಿಕ ಪುತ್ರಿಯ ಜೊತೆಗೂಡಿ ತಂದೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿದೆ.
ಓದಿ: ಪೊಲೀಸರು ಬೆನ್ನಟ್ಟಿದ್ದಾರೆ ಎಂದು ಭಾವಿಸಿ ನದಿಗೆ ಹಾರಿದ ಸ್ಮಗ್ಲರ್ಸ್.. ದುರ್ಮರಣ