ವಿಜಯವಾಡ(ಆಂಧ್ರಪ್ರದೇಶ): ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ಆರ್ ಜಗನಮೋಹನ್ ರೆಡ್ಡಿ ತವರು ಜಿಲ್ಲೆಯಲ್ಲೇ ಅಮಾನವೀಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ಯುವಕನೊಬ್ಬ ತನ್ನ 9 ಸ್ನೇಹಿತರೊಂದಿಗೆ ಸೇರಿಕೊಂಡು ಅಪ್ರಾಪ್ತೆ ಮೇಲೆ ಕಳೆದ ಕೆಲ ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ. ಸಿಎಂ ಜಗನ್ ಮೋಹನ್ರೆಡ್ಡಿ ತವರು ಜಿಲ್ಲೆಯ ಪ್ರದ್ದತ್ತೂರಿನಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಗರ್ಭಿಣಿಯಾಗುತ್ತಿದ್ದಂತೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣದ ಬಗ್ಗೆ ಗೊತ್ತಾದರೂ ಕೂಡ ಪೊಲೀಸರು ಆರಂಭದಲ್ಲಿ ಯಾವುದೇ ರೀತಿಯ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂಬ ಮಾತು ಕೇಳಿ ಬಂದಿದೆ. ಪ್ರದ್ದತ್ತೂರು ಪಟ್ಟಣದ ಇಸ್ಲಾಂಪುರಂ ಬೀದಿಯಲ್ಲಿರುವ ಮಸೀದಿಯಲ್ಲಿ ಅಪ್ರಾಪ್ತೆ ಆಶ್ರಯ ಪಡೆದುಕೊಂಡಿದ್ದು, ಭಿಕ್ಷೆ ಬೇಡುವ ಕೆಲಸ ಮಾಡುತ್ತಿದ್ದಾಳೆ. ಆಕೆಯ ತಂದೆ ಕೂಡ ಮತ್ತೊಂದು ದೇವಸ್ಥಾನದಲ್ಲಿ ಭೀಕ್ಷೆ ಬೇಡುವ ಕಾರ್ಯ ಮಾಡುತ್ತಿದ್ದು, ಹಲವು ವರ್ಷಗಳ ಹಿಂದೆ ಬಾಲಕಿಯ ತಾಯಿ ತೀರಿಕೊಂಡಿದ್ದಾಳೆ.
ಇಸ್ಲಾಂಪುರಂ ಬೀದಿಯಲ್ಲಿರುವ ಯುವಕನೊಬ್ಬ ಡೆಕೋರೇಷನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಈ ಬಾಲಕಿಯನ್ನ ನೋಡಿದ್ದಾನೆ. ಈ ವೇಳೆ ಆತನ ಸ್ನೇಹಿತರೊಂದಿಗೆ ಸೇರಿ ಬಾಲಕಿ ಮೇಲೆ ಕಳೆದ ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: EXCLUSIVE: ನನ್ನ ವಿರುದ್ಧ ಸ್ಪರ್ಧೆ ಮಾಡಿ, ಉದ್ಧವ್ ಠಾಕ್ರೆಗೆ ನವನೀತ್ ಕೌರ್ ಸವಾಲು
ಘಟನೆಗೆ ಸಂಬಂಧಿಸಿದಂತೆ ಕಳೆದ ಮೇ. 4 ರಂದು ಮಹಿಳಾ ಪೊಲೀಸ್ ಪೇದೆ ಸಂತ್ರಸ್ತೆ ಜೊತೆ ಮಾತನಾಡಿ, ಎಲ್ಲ ಮಾಹಿತಿ ಪಡೆದುಕೊಂಡಿದ್ದಾಳೆ. ಈ ವೇಳೆ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಬಾಲಕಿ ಹೇಳಿಕೊಂಡಿದ್ದಾಳೆ. ಈ ಮಾಹಿತಿಯನ್ನ ಸರ್ಕಲ್ ಇನ್ಸ್ಪೆಕ್ಟರ್ ಗಮನಕ್ಕೆ ತರಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯ ಅಮೃತನಗರದಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ. ಇನ್ನು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎನ್ನಲಾಗಿದೆ.
ಸಂತ್ರಸ್ತೆಯನ್ನ ಮೈಲವರಂನಲ್ಲಿರುವ ಖಾಸಗಿ ದತ್ತಿ ಸಂಸ್ಥೆಗೆ ಸೇರಿದ ಆಶ್ರಮಕ್ಕೆ ಕಳುಹಿಸಲಾಗಿದ್ದು, ಸದ್ಯ ಅಲ್ಲೇ ಆಶ್ರಯ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಎಸ್ಪಿ ಪ್ರಸಾದ್ ರಾವ್, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ನಮ್ಮ ಗಮನಕ್ಕೆ ಬಂದಿದ್ದು, ತನಿಗೆ ಆದೇಶ ನೀಡಲಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.