ಸಿರ್ಸಿಲ್ಲಾ(ತೆಲಂಗಾಣ): ಪೊಲೀಸ್ ಠಾಣೆ ಮೆಟ್ಟಿಲೇರಲು ಇಂದಿನ ದಿನಗಳಲ್ಲೂ ಅನೇಕರು ಹಿಂದೇಟು ಹಾಕ್ತಾರೆ. ಆದರೆ, ಮನೆಯಲ್ಲಿ ನಡೆಯುತ್ತಿದ್ದ ತಂದೆ-ತಾಯಿ ಜಗಳದಿಂದ ನೊಂದಿರುವ ಬಾಲಕನೋರ್ವ ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾನೆ. ಅಪ್ಪ ದಿನಾಲೂ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾರೆ ಸಾರ್ ಎಂದು 3ನೇ ತರಗತಿ ಪುಟ್ಟ ಬಾಲಕನೋರ್ವ ಪೊಲೀಸರಿಗೆ ತಿಳಿಸಿದ್ದಾನೆ. ತೆಲಂಗಾಣದ ಸಿರ್ಸಿಲ್ಲಾ ಎಂಬಲ್ಲಿ ಈ ಘಟನೆ ನಡೆಯಿತು.
ಪ್ರತಿದಿನ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬರುವ ತಂದೆ ನನ್ನ ತಾಯಿಗೆ ಹಲ್ಲೆ ನಡೆಸುತ್ತಾರೆ. ಇದರಿಂದ ಮನೆಯಲ್ಲಿ ಇಬ್ಬರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ ಎಂದು ಆತ ಪ್ರಕರಣ ದಾಖಲಿಸಿದ್ದಾನೆ. ಸಿರ್ಸಿಲ್ಲಾ ಜಿಲ್ಲೆಯ ಮುಸ್ತಾಬಾದ್ನಲ್ಲಿ ವಾಸವಾಗಿರುವ ದೀಪಿಕಾ-ಬಾಲಕಿಶನ್ ದಂಪತಿಗೆ ಭರತ್ ಮತ್ತು ಶಿವಾನಿ ಎಂಬಿಬ್ಬರು ಮಕ್ಕಳಿದ್ದಾರೆ. ಬಾಲಕಿಶನ್ ಮದ್ಯಕ್ಕೆ ದಾಸನಾಗಿ ಪತ್ನಿ ಮನಬಂದಂತೆ ಹಲ್ಲೆ ನಡೆಸುತ್ತಾನೆ. ಇದನ್ನು ನೋಡಿರುವ ಭರತ್ ದೌರ್ಜನ್ಯ ಸಹಿಸಲಾಗದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ನಿನ್ನೆ ಬೆಳಗ್ಗೆ ಕೂಡ ಕುಡಿದ ಅಮಲಿನಲ್ಲಿದ್ದ ತಂದೆಯನ್ನು ನೋಡಿರುವ ಮಗ ಪೊಲೀಸ್ ಠಾಣೆಗೆ ತೆರಳಿದ್ದು, ಠಾಣೆಯಲ್ಲಿದ್ದ ಎಸ್ಐ ವೆಂಕಟೇಶ್ವರಲು ಅವರಿಗೆ ವಿಷಯ ವಿವರಿಸಿದ್ದಾನೆ. "ಪೊಲೀಸ್ ಠಾಣೆಗೆ ಬರಲು ನಿನಗೆ ಯಾರು ಹೇಳಿದರು?" ಎಂದು ಸಬ್ ಇನ್ಸ್ಪೆಕ್ಟರ್ ಕೇಳಿದ್ದಾರೆ. ಆಗ ಆತ, "ನಾನೇ ಬಂದಿರುವೆ ಸಾರ್" ಎಂದು ಹೇಳಿದ್ದಾನೆ. "ಪೊಲೀಸರು ನಿಮಗೆ ನ್ಯಾಯ ಕೊಡುತ್ತಾರೆ ಎಂಬ ನಂಬಿಕೆ ಇದೆಯೇ?" ಎಂದು ಮರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಹಸು ಕಾಣೆಯಾಗಿದ್ದಕ್ಕೆ ಮನೆಯವರು ಹೊಡೆಯುತ್ತಾರೆಂದು ಹೆದರಿ ಬಾಲಕ ಆತ್ಮಹತ್ಯೆ
ಆ ಹುಡುಗ, "ಸಾರ್, ನೀವು ಸಹಾಯ ಮಾಡುತ್ತೀರಿ ಎಂಬ ನಂಬಿಕೆಯಿಂದ ಬಂದಿದ್ದೇನೆ" ಎಂದಿದ್ದ. ಆ ಬಾಲಕನ ಉತ್ತರದಿಂದ ಪ್ರಭಾವಿತರಾದ ಎಸ್ಐ, ತಕ್ಷಣವೇ ಬಾಲಕನ ಪೋಷಕರನ್ನು ಠಾಣೆಗೆ ಕರೆತಂದಿದ್ದಾರೆ. ಬಾಲಕಿಶನ್ಗೆ ಕೌನ್ಸೆಲಿಂಗ್ ಮಾಡಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದ್ದಾರೆ.