ನವದೆಹಲಿ : ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರು ಹಾಗೂ ಕೇಂದ್ರ ಸರ್ಕಾರದ ನಡುವೆ ನಿನ್ನೆ 5ನೇ ಸುತ್ತಿನ ಮಾತುಕತೆ ನಡೆಯಿತು. ವಿಜ್ಞಾನ ಭವನದಲ್ಲಿ ನಡೆದ ಈ ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬರದ ಕಾರಣ ಕೇಂದ್ರ ಸರ್ಕಾರದ ಮೂವರು ಮಂತ್ರಿಗಳು ಮತ್ತು 32 ಪ್ರಮುಖ ರೈತ ಸಂಘಟನೆಗಳ ಪ್ರತಿನಿಧಿಗಳ ನಡುವೆ ಮತ್ತೊಮ್ಮೆ ಡಿಸೆಂಬರ್ 9ರಂದು ಸಭೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿದ ಬಳಿಕ ಈ ಕೃಷಿ ಕಾನೂನುಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆಂದು ನಿನ್ನೆ ನಡೆದ ಸಭೆಯಲ್ಲಿ ಹಾಜರಿದ್ದ ರೈತ ಮುಖಂಡರು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: 5ನೇ ಸಭೆಯಲ್ಲೂ ಕೇಂದ್ರ - ರೈತರ ನಡುವೆ ಮೂಡದ ಒಮ್ಮತ: ಡಿ.9ಕ್ಕೆ ಮತ್ತೊಂದು ಸುತ್ತಿನ ಮಾತುಕತೆ
ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಸಭೆಯನ್ನು ಬಹಿಷ್ಕರಿಸುವುದಾಗಿ ರೈತ ಮುಖಂಡರು ಎಚ್ಚರಿಸಿದ ವೇಳೆ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ಕೇಂದ್ರ ಸಚಿವ ಸೋಮ್ ಪ್ರಕಾಶ್ ಅವರು ಈ ವಿಷಯವನ್ನು ಪ್ರಧಾನಮಂತ್ರಿಗೆ ತಿಳಿಸಲಿದ್ದೇವೆ. ಕ್ಯಾಬಿನೆಟ್ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ: ಕೇಂದ್ರ - ರೈತರ ನಡುವೆ ಇಂದು ಮತ್ತೊಂದು ಸುತ್ತಿನ ಮಾತುಕತೆ
ಡಿಸೆಂಬರ್ 9ರ ಮೊದಲು ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸಿ, ನಂತರ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾಸಂಘದ ( ಮಹಾರಾಷ್ರ್ರ) ಸಂದೀಪ್ ಗಿಡ್ಡೆ ಹೇಳಿದರು.