ಸೂರ್ಯಪೇಟೆ(ತೆಲಂಗಾಣ) : ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪ್ರತಿಮೆಯನ್ನು ಸೂರ್ಯಪೇಟೆಯಲ್ಲಿ ಅನಾವರಣಗೊಳಿಸಲಾಗಿದೆ. ಮೊದಲ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಪಟ್ಟಣದ ಕೋರ್ಟ್ ಸ್ಕ್ವೇರ್ ಸರ್ಕಲ್‌ನಲ್ಲಿ ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪುರಸಭೆ ಸಚಿವ ಕೆ ಟಿ ರಾಮರಾವ್ ಉದ್ಘಾಟಿಸಿದರು.
ಸೂರ್ಯಪೇಟೆಯಲ್ಲಿ ಸಂತೋಷ್ ಬಾಬು ಅವರ ಪ್ರತಿಮೆಯನ್ನು ಸ್ಥಾಪಿಸಿ ಅವರ ಹೆಸರನ್ನು ವೃತ್ತಕ್ಕೆ ಇಡುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಈ ಹಿಂದೆ ಭರವಸೆ ನೀಡಿದ್ದರು. ಇದೀಗ ಒಂದು ವರ್ಷದಲ್ಲಿ 20 ಲಕ್ಷ ರೂ. ವೆಚ್ಚದೊಂದಿಗೆ ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಸರ್ಕಾರ ಉದ್ಘಾಟಿಸಿದೆ.
ಅವರದ್ದು ಮರೆಯದ ಅನುಬಂಧ.. ಜೀವ ಜೀವದ ಬಂಧ
ಈ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನನಾಡಿದ ಕರ್ನಲ್ ಸಂತೋಷ್ ಬಾಬು ಪತ್ನಿ ಬಿ. ಸಂತೋಷಿ, ನಾನು ಪ್ರತಿ ದಿನ ಅವರ ಬಗ್ಗೆ ಯೋಚಿಸುತ್ತೇನೆ. ಅವರ ನಿಧನವು ಕುಟುಂಬದಲ್ಲಿ ಎಂದಿಗೂ ತುಂಬಲು ಸಾಧ್ಯವಾಗದ ನಷ್ಟ. ಅವರ ಜೀವನವು ಸುಲಭವಾದದ್ದಲ್ಲ, ನಾನು ಅವರೊಂದಿಗೆ ವಾಸಿಸುತ್ತಿದ್ದ ಸಂದರ್ಭದಲ್ಲಿ ನಾನು ಜೀವನದ ಬಗ್ಗೆ ಬಹಳಷ್ಟು ಕಲಿತಿದ್ದೇನೆ ಮತ್ತು ಅವರ ನೆನಪುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ಅವರು ಸದಾ ನನ್ನೊಂದಿಗೇ ಇರುತ್ತಾರೆ : ಸಂತೋಷಿ
ಸಮಾಜದಲ್ಲಿ ಎಲ್ಲರೂ ನನ್ನ ಪರವಾಗಿ ನಿಂತಿದ್ದಾರೆ, ನನಗೆ ಬೆಂಬಲ ನೀಡಿದ್ದಾರೆ ಮತ್ತು ಅವರು ಯಾವಾಗಲೂ ಇರುತ್ತಾರೆ ಎಂದು ನಾನು ಭಾವಿಸುತ್ತೇನೆ. ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿರುವ ಸೈನಿಕರ ಕುಟುಂಬಗಳನ್ನು ಬೆಂಬಲಿಸುವಂತೆ ನಾನು ಎಲ್ಲರಲ್ಲೂ ವಿನಂತಿಸುತ್ತೇನೆ. ನಮ್ಮ ಅನೇಕ ಸೈನಿಕರು ಎಲ್ಲಾ ಕಷ್ಟಗಳನ್ನು ಧೈರ್ಯದಿಂದ ಎದುರಿಸಿ ರಾಷ್ಟ್ರವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಅವರ ಕುಟುಂಬಗಳಿಗೆ ಬೆಂಬಲ ನೀಡುವಂತೆ ನಾನು ಪ್ರತಿಯೊಬ್ಬರನ್ನು ಕೇಳುತ್ತೇನೆ ಎಂದು ಸಂತೋಷಿ ಹೇಳಿದ್ದಾರೆ.