ಹೈದರಾಬಾದ್(ತೆಲಂಗಾಣ): ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಟಿಆರ್‌ಎಸ್ ಮತ್ತು ಎಂಐಎಂ ಮುಖಂಡರು ಹೈದರಾಬಾದ್ನಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಅಕ್ರಮ ವಲಸಿಗರನ್ನು ಬಳಸಿಕೊಂಡಿದೆ ಎಂದು ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಬುಧವಾರ ಆರೋಪಿಸಿದ್ದಾರೆ.
ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ (ಜಿಎಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಲು ನಗರಕ್ಕೆ ಬಂದಿದ್ದ ಕೇಂದ್ರ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರೋಹಿಂಗ್ಯಾ ಮುಸ್ಲಿಮರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಳ್ಳುವ ಮೂಲಕ ಎಂಐಎಂ ನಾಯಕರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲಿನ ಎರಡು ಟೆಲಿವಿಷನ್ ಚಾನೆಲ್‌ಗಳು ಅಕ್ರಮ ವಲಸಿಗರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದರ ಬಗ್ಗೆ ಖಚಿತಪಡಿಸಿ ಸುದ್ದಿ ಪ್ರಸಾರ ಮಾಡಿವೆ ಎಂದು ಅವರು ಆರೋಪ ಮಾಡಿದರು.
ಮತದಾರರ ಪಟ್ಟಿಯಲ್ಲಿ ಸೇರಿಸಿದ್ದಕ್ಕೆ ರೋಹಿಂಗ್ಯಾ ಮುಸ್ಲಿಮರು ಎಂಐಎಂ ನಾಯಕರ ಜೊತೆ ಅಲ್ಲಿನ ಮುಖ್ಯಮಂತ್ರಿಗೂ ಬಹಿರಂಗವಾಗಿ ಕೃತಜ್ಞತೆ ಸಲ್ಲಿಸಿರುವ ವಿಡಿಯೋ ತುಣುಕೊಂದು ಅವರ ಅಸಲಿ ಬಣ್ಣ ಹೇಳುತ್ತಿದೆ.
ಎಂಐಎಂ ಮತ್ತು ಟಿಆರ್‌ಎಸ್ ಮೈತ್ರಿ ಮಾಡಿಕೊಳ್ಳುವ ಉದ್ದೇಶಪೂರ್ವಕವಾಗಿ ಅಕ್ರಮ ವಲಸಿಗರನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡಿವೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದಿದ್ದಾರೆ. ಅಕ್ರಮ ವಲಸಿಗರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ತನಿಖೆ ನಡೆಸಲು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಏಕೆ ಆದೇಶ ನೀಡಿಲ್ಲ ಎಂದು ಇದೇ ವೇಳೆ ಪ್ರಶ್ನಿಸಿದರು.
ಮತದಾರರ ಪಟ್ಟಿಯಲ್ಲಿ ರೋಹಿಂಗ್ಯಾಗಳನ್ನು ಸೇರಿಸಿದ್ದರ ಬಗ್ಗೆ ಕೇಂದ್ರ ಸರ್ಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸಚಿವೆ, ಇದು ರಾಜ್ಯಕ್ಕೆ ಸಂಬಂಧಿಸಿದ ಕಾನೂನು. ರಾಜ್ಯ ಸರ್ಕಾರವೇ ಈ ಬಗ್ಗೆ ಕ್ರಮ ಕೈಕೊಳ್ಳಬೇಕು ಎಂದು ಮುಖ್ಯಮಂತ್ರಿ ಮೇಲೆಯೂ ಆರೋಪ ಮಾಡಿದರು.
ಇದೇ ವೇಳೆ ಜಿಹೆಚ್ಎಂಸಿಗೆ ಡಿಸೆಂಬರ್ 1ರಂದು ನಡೆಯುವ ಚುನಾವಣೆಯಲ್ಲಿ ಹೈದರಾಬಾದ್ ಜನರು ಬಿಜೆಪಿಯನ್ನು ಕೈಬಿಡುವುದಿಲ್ಲ, ಆಶೀರ್ವದಿಸಿ ಗೆಲ್ಲಿಸಿ ತರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.