ಹೈದರಾಬಾದ್: 2015ರ ಬಿಹಾರ ವಿಧಾನಸಭೆ ಚುನಾವಣೆಗೆ ಹೋಲಿಕೆ ಮಾಡಿದಾಗ ಈ ಸಲ ಎಡಪಕ್ಷಗಳು ಭರ್ಜರಿ ಕಮ್ಬ್ಯಾಕ್ ಮಾಡಿದ್ದು, ಸುಮಾರು 19ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಹೊಸ ದಾಖಲೆ ನಿರ್ಮಾಣ ಮಾಡಿವೆ.
ಅದೇ ರೀತಿ, ಬಿಹಾರ ಚುನಾವಣೆಯಲ್ಲಿ ಈ ಸಲ ಎಐಎಂಐಎಂ ಪಕ್ಷ ಐದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಹಾರದ ಅಮೂರ್, ಬೈಸಿ, ಜೋಕಿಹಾತ್, ಕೋಚ್ಧಮನ್, ಬಹದ್ದೂರ್ಗಂಜ್ ಕ್ಷೇತ್ರಗಳಲ್ಲಿ ಓವೈಸಿ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಇದೇ ವಿಚಾರವಾಗಿ ಹೈದರಾಬಾದ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಓವೈಸಿ, ಇದು ಅಲ್ಲಿನ ಜನರಿಗೆ ಸಿಕ್ಕ ಗೆಲುವು ಎಂದು ಹೇಳಿದ್ದಾರೆ.
ಇದೊಂದು ಐತಿಹಾಸಿಕ ಸಾಧನೆ ಎಂದಿರುವ ಅವರು, ವೋಟ್ ಮಾಡಿ ಗೆಲ್ಲಿಸಿರುವ ಪ್ರತಿ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಸರ್ಕಾರ ರಚನೆ ಮಾಡುವ ವೇಳೆ ನಾವು ಆರ್ಜೆಡಿಗೆ ಸಪೋರ್ಟ್ ಮಾಡಬೇಕೋ ಅಥವಾ ಎನ್ಡಿಎ ಪಕ್ಷಕ್ಕೂ ಎಂಬುದರ ಬಗ್ಗೆ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಮುಂದಿನ ಚುನಾವಣೆಯಲ್ಲಿ ಮತ್ತಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುವ ಇರಾದೆ ಹೊರಹಾಕಿದ್ದಾರೆ.
ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಮುಂದಿನ ಚುನಾವಣೆಯಲ್ಲೂ ಉತ್ತಮ ಸಾಧನೆ ನೀಡುವ ಭರವಸೆ ಹೊರಹಾಕಿರುವ ಓವೈಸಿ, ಕ್ಷೇತ್ರಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.